ಕರ್ನಾಟಕ

karnataka

By

Published : Jan 16, 2023, 7:11 AM IST

ETV Bharat / state

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ಶೂ ವ್ಯಾಪಾರಿಯಿಂದ ₹10 ಲಕ್ಷ ದರೋಡೆ

ಸಿಸಿಬಿ ಪೊಲೀಸರ ಸೋಗಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಶೂ ವ್ಯಾಪಾರಿಯಿಂದ 10 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.

Bengaluru
ಬೆಂಗಳೂರು

ಬೆಂಗಳೂರು:ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರ ಸೋಗಿನಲ್ಲಿ ವ್ಯಾಪಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಲ್ಲೆ ನಡೆಸಿ 10 ಲಕ್ಷ ರೂ., ಲಪಟಾಯಿಸಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಜನವರಿ 13ರಂದು ಸಿರ್ಸಿ ವೃತ್ತದ ಬಳಿ ಸಂಜೆ 7.45ರ ಸುಮಾರಿಗೆ ಘಟನೆ ನಡೆದಿದೆ. ಉತ್ತರ ಭಾರತ ಮೂಲದ ಕಾಟನ್‌ಪೇಟೆಯ ನಿವಾಸಿ ಮುಲರಾಮ್ (37) ದರೋಡೆಗೊಳಗಾದವರು.

ಮುಲರಾಮ್ ನರ್ಗರ್ತಪೇಟೆ ಬಳಿ ಶೂ ಅಂಗಡಿ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಬಟ್ಟೆ ವ್ಯಾಪಾರಿ ರಮೇಶ್ ಮುಲರಾಮ್ ಹಾಗೂ ಉತ್ತರ ಭಾರತದ ಕೆಲವರಿಗೆ ಉದ್ಯಮ ನಡೆಸಲು ಹಣ ಕೊಡುತ್ತಿದ್ದರು. ತಾವು ಕೆಲ ವ್ಯಾಪಾರಿಗಳಿಗೆ ಕೊಟ್ಟ ಹಣವನ್ನು ಸಂಗ್ರಹಿಸಿಕೊಂಡು ತರುವಂತೆ ಜ.13ರಂದು ಮುಲರಾಮ್‌ಗೆ ರಮೇಶ್ ಹೇಳಿದ್ದರು. ಅದರಂತೆ, ಮುಲರಾಮ್ ಅದೇ ದಿನ ಸಂಜೆ ಕೆಲ ವ್ಯಾಪಾರಿಗಳಿಂದ 10 ಲಕ್ಷ ರೂ.ಯನ್ನು ಸಂಗ್ರಹಿಸಿಕೊಂಡು ಬ್ಯಾಗ್‌ನಲ್ಲಿ ತುಂಬಿ ಸೆಟಲೈಟ್ ಬಸ್ ನಿಲ್ದಾಣದ ಬಳಿಯಿರುವ ರಮೇಶ್ ನೀಡಲು ಬೈಕ್‌ನಲ್ಲಿ ಬರುತ್ತಿದ್ದರು.

ಸಿಸಿಬಿ ಸೋಗಿನಲ್ಲಿ ದರೋಡೆ: ಸಂಜೆ 7.45ರ ಸುಮಾರಿಗೆ ಸಿರ್ಸಿ ವೃತ್ತದಿಂದ ಕೊಂಚ ಮುಂದೆ ಸಾಗುತ್ತಿದ್ದಂತೆ ಎರಡು ಬೈಕ್‌ನಲ್ಲಿ ಮುಲರಾಮ್ ಅವರನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ಅಪರಿಚಿತರು, ನಾವು ಸಿಸಿಬಿ ಪೊಲೀಸರು ಗಾಡಿ ನಿಲ್ಲಿಸಿ ಎಂದು ಸೂಚಿಸಿದ್ದರು. ಸಿಸಿಬಿ ಪೊಲೀಸರು ಇರಬಹುದು ಎಂದು ಭಾವಿಸಿದ ಮುಲರಾಮ್ ಬೈಕ್ ಅನ್ನು ರಸ್ತೆ ಪಕ್ಕ ನಿಲ್ಲಿಸಿದ್ದರು. ಆ ವೇಳೆ ನಾಲ್ವರ ಪೈಕಿ ಇಬ್ಬರು ಮುಲರಾಮ್‌ನನ್ನು ಹಿಡಿದುಕೊಂಡರೆ, ಮತ್ತಿಬ್ಬರು 10 ಲಕ್ಷ ರೂ.ಯಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು.

ಆರೋಪಿಗಳಿಗೆ ಶೋಧ: ಮುಲರಾಮ್ ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರೆ ತಮ್ಮ ಸುಳಿವು ಸಿಗಬಹುದು ಎಂಬ ಕಾರಣಕ್ಕೆ ದುಷ್ಕರ್ಮಿಗಳು ಬ್ಲೇಡ್‌ನಿಂದ ಅವರ ಕೈ ಬೆರಳುಗಳಿಗೆ ಗಾಯಗೊಳಿಸಿದ್ದರು. ಹೀಗಾಗಿ ಮುಲರಾಮ್ ಪ್ರಕರಣ ನಡೆದ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮುಖಚಹರೆ ಕಾಣದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಪಿಗಳು ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರವಾಹನದಲ್ಲಿ ಬಂದಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ಆರೋಪಿಗಳಿಗೆ ಶೋಧ ಮುಂದುವರೆಸಿದ್ದಾರೆ.

ಲಾರಿಗೆ ಬೈಕ್​​ ಡಿಕ್ಕಿ, ಸವಾರ ಸಾವು: ರಸ್ತೆ ಬದಿ ನಿಂತ್ತಿದ್ದ ಲಾರಿಗೆ ಹಿಂದಿನಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಬೇಗೂರು ನಿವಾಸಿ ಸಮೀರ್ (18) ಮೃತ ಬೈಕ್​ ಸವಾರ. ಶನಿವಾರ ರಾತ್ರಿ 9-10ರ ಸುಮಾರಿಗೆ ಬನ್ನೇರುಘಟ್ಟದ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬರುವಾಗ ನೈಸ್ ರಸ್ತೆಯ ಬೇಗೂರು ಸೇತುವೆ ಬಳಿ ಈ ಅಪಘಾತ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಪೊಲೀಸರ ಸೋಗಿನಲ್ಲಿ ಲಾಠಿ ತೋರಿಸಿ 80 ಲಕ್ಷ ರೂ ಕಿತ್ತುಕೊಂಡು ಪರಾರಿ!

ABOUT THE AUTHOR

...view details