ಬೆಂಗಳೂರು:ಇತ್ತೀಚೆಗೆ ಅದ್ಧೂರಿಯಾಗಿ ಉದ್ಘಾಟನೆಗೊಂಡು ಕಾರ್ಯಾರಂಭಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಕೆ.ಆರ್.ಪುರಂ ಹಾಗೂ ಕಂಟೋನ್ಮೆಂಟ್ ನಿಲ್ದಾಣದ ಮಾರ್ಗದ ನಡುವೆ ನಿನ್ನೆ ಬೆಳಿಗ್ಗೆ ಸಂಭವಿಸಿದೆ. ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲಿನ ಸಿ-4 ಹಾಗೂ ಸಿ-5 ಬೋಗಿಯ ಆರು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.
ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ರೈಲಿನ ಮೇಲೆ ಕಲ್ಲು ತೂರಾಟದ ವರದಿಯಾಗಿದೆ. ಕೆ.ಆರ್.ಪುರಂ ನಿಲ್ದಾಣದಿಂದ ಕೊಂಚ ದೂರದಲ್ಲಿ ಘಟನೆ ನಡೆದಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ರೈಲಿನ ಸಿ4 ಬೋಗಿಯ 10, 11, 12 ಹಾಗೂ ಸಿ 5 ಬೋಗಿಯ 20, 21, 22ರ ಗಾಜುಗಳು ಒಡೆದಿವೆ.
ಘಟನೆ ಸಂಬಂಧ ಆರ್.ಪಿ.ಎಫ್ ಅಧಿಕಾರಿಗಳು ದೂರು ದಾಖಲಿಸಿದ್ದು, ಇಂದಿನಿಂದ ರೈಲ್ವೆ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಕಂಟೋನ್ಮೆಂಟ್, ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ರೈಲು ಸಂಚರಿಸುವ ಸಮಯದಲ್ಲಿ ಟ್ಯಾನರಿ ರಸ್ತೆ ಬ್ರಿಡ್ಜ್, ಕಲ್ಲಪಲ್ಲಿ ಸ್ಮಶಾನ, ಜೀವನಹಳ್ಳಿ ಸೇರಿದಂತೆ ಹಲವೆಡೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ರೈಲಿಗೆ ಅಲ್ಲಲ್ಲಿ ಸಂಕಷ್ಟ:ನವೆಂಬರ್ 8ರಂದುಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.