ಬೆಂಗಳೂರು: ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನ್ನು ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವುದಾಗಿ ನಗರ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪಿಎಸ್ಐ ಮಂಜುನಾಥ್ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 354 ಎ ಹಾಗೂ 354 ಬಿ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಏಪ್ರಿಲ್ 10 ರಂದು ಪಿಎಸ್ಐ ಮಂಜುನಾಥ್ ಸ್ವಾಮಿ ತನ್ನೊಂದಿಗೆ ಮೈ-ಕೈ ಮುಟ್ಟಿ ಅನುಚಿತ ವರ್ತನೆ ತೋರಿರುವುದಾಗಿ ಸಂತ್ರಸ್ತೆ ಟ್ವೀಟ್ ಮಾಡಿ ಡಿಸಿಪಿಗೆ ಟ್ಯಾಗ್ ಮಾಡಿದ್ದರು. ಕೃತ್ಯ ಸಂಬಂಧ ಮಾಹಿತಿ ಪಡೆದುಕೊಂಡ ಆಗ್ನೇಯ ವಿಭಾಗದ ಡಿಸಿಪಿ, ನೊಂದ ಮಹಿಳೆಯಿಂದ ಲಿಖಿತ ದೂರು ಪಡೆದುಕೊಂಡಿದ್ದರು. ಪಿಎಸ್ಐ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸದೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.