ಬೆಂಗಳೂರು:ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೆ ಟೆಂಡರ್ ಪ್ರಕ್ರಿಯೆ ನಡೆಸದೆ ಸುಮಾರು 29 ಲಕ್ಷ ರೂ.ಗಳ ಕಾಮಗಾರಿಗಳನ್ನು ನಡೆಸಿ ಬಿಲ್ ಪಾವತಿಸಿದ್ದ ಆರೋಪದಲ್ಲಿ ಪೌರಾಡಳಿತ ಇಲಾಖೆ ನಿವೃತ್ತ ಆಯುಕ್ತರೊಬ್ಬರ ವಿರುದ್ಧ 28 ವರ್ಷ ತನಿಖೆ ನಡೆಸದ ನಗರಾಭಿವೃದ್ಧಿ ಇಲಾಖೆ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನಿವೃತ್ತ ಆಯುಕ್ತ ಕೆ.ಎಂ. ರಾಮಪ್ಪ ಎಂಬುವರ ವಿರುದ್ಧದ ಆರೋಪ ಬೆಳಕಿಗೆ ಬಂದು 20 ವರ್ಷಗಳ ಬಳಿಕ ತನಿಖೆಗೆ ಆದೇಶ ನೀಡಿದ್ದ ಕ್ರಮವನ್ನು ರದ್ದುಪಡಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶವನ್ನು ಪ್ರಶ್ನಿಸಿ ನಗರಾಭಿವೃದ್ಧಿ ಇಲಾಖೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ವಿಭಾಗೀಯ ಪೀಠ, ಕೆಎಟಿ ಕ್ರಮವನ್ನು ಎತ್ತಿ ಹಿಡಿದಿದೆ. ಅಲ್ಲದೆ, ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
1996ರಿಂದ 97ರ ಅವಧಿಯಲ್ಲಿ ಆರೋಪ ಬೆಳಕಿಗೆ ಬಂದಿದ್ದು ಪ್ರತಿವಾದಿಯಾಗಿರುವ (ಆರೋಪಿತ) ರಾಮಪ್ಪ ಅವರು ನಿವೃತ್ತಿಯಾಗಿ 13 ವರ್ಷಗಳ ಬಳಿಕ ತನಿಖಾಧಿಕಾರಿಯನ್ನು ನೇಮಕ ಮಾಡಲಾಗಿದೆ. ತನಿಖಾಧಿಕಾರಿ ಈವರೆಗೂ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಒಂದು ಸಭೆ ನಡೆಸಿಲ್ಲ. ಇದೀಗ ಮತ್ತೊಬ್ಬರು ತನಿಖಾಧಿಕಾರಿಯನ್ನು ನೇಮಕ ಮಾಡಲಾಗಿದೆ.
ವಿಳಂಬವಾಗಿ ತನಿಖೆಗೆ ಆದೇಶ ನೀಡಿರುವುದನ್ನು ಗಮನಿಸಿ ರಾಮಪ್ಪ ಸಲ್ಲಿಸಿರುವ ಅರ್ಜಿಯನ್ನು ಕೆಎಟಿ ಪುರಸ್ಕರಿಸಿದೆ. ಹೀಗಾಗಿ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲು ಯಾವುದೇ ಕಾರಣಗಳು ಕಾಣುತ್ತಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು ?:ಬೆಂಗಳೂರಿನ ಕೆ.ಆರ್. ಪುರದ ಪುರಸಭೆಯ ಆಯುಕ್ತರಾಗಿದ್ದ ರಾಮಪ್ಪ ಅವರು 1996 ರಿಂದ 1997ರ ಅವಧಿಯಲ್ಲಿ ಟೆಂಡರ್ ಕರೆಯದೆ ಕೆಲ ಕಾಮಗಾರಿಗಳನ್ನು ನಡೆಸಿ ಬಿಲ್ ಪಾವತಿಸುವ ಸಂಬಂಧ ಆರೋಪ ಎದುರಾಗಿತ್ತು. ಸರ್ಕಾರ ಈ ಸಂಬಂಧ 2006ರ ನವೆಂಬರ್ 10ರಂದು ಅರ್ಜಿದಾರರ ವಿರುದ್ಧ ತನಿಖೆಗೆ ಆದೇಶಿಸಲಾಗಿತ್ತು.
ಈ ನಡುವೆ ರಾಮಪ್ಪ ದೊಡ್ಡಬಳ್ಳಾಪುರ ಪುರಸಭೆಯ ಆಯುಕ್ತರಾಗಿ ವರ್ಗಾವಣೆಗೊಂಡ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ (2007ರ ಡಿಸೆಂಬರ್ 7 ರಂದು) ಈ ಸಂಬಂಧ ಪತ್ರ ರಾಮಪ್ಪನವರಿಗೆ ತಲುಪಿತ್ತು. ಜತೆಗೆ, ಪತ್ರಕ್ಕೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಲಾಗಿತ್ತು. ಪ್ರತಿಯೊಂದು ಆರೋಪಕ್ಕೆ ಸಂಬಂಧಿಸಿದಂತೆ ರಾಮಪ್ಪ ಸಂಪೂರ್ಣ ವಿವರವಾದ ಪ್ರತಿಕ್ರಿಯೆ ನೀಡಿದ್ದರು. ಜತೆಗೆ, ತಮ್ಮ ವಿರುದ್ಧ ತಪ್ಪಾಗಿ ಗ್ರಹಿಸಿಕೊಂಡಿರುವುದಾಗಿ ತಿಳಿಸಿ ಆರೋಪವನ್ನು ನಿರಾಕರಿಸಿದ್ದರು.
ಇದಾದ ಬಳಿಕ 2010ರ ಮೇ 31ರಂದು ರಾಮಪ್ಪ ನಿವೃತ್ತರಾಗಿದ್ದರು. ಈ ಎಲ್ಲ ಪ್ರಕ್ರಿಯೆ ನಡೆದ 18 ವರ್ಷಗಳ ಬಳಿಕ ನಗರಾಭಿವೃದ್ಧಿಯ ಪ್ರಧಾನ ಕಾರ್ಯದರ್ಶಿಗಳು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿದ್ದರು. ಆದರೆ, ತನಿಖಾಧಿಕಾರಿ ಯಾವುದೇ ಸಭೆಗಳನ್ನು ನಡೆಸಿರಲಿಲ್ಲ. ಇದಾದ ಬಳಿಕ 2019ರಲ್ಲಿ ಮತ್ತೊಬ್ಬರು ತನಿಖಾಧಿಕಾರಿಯನ್ನು ನೇಮಕ ಮಾಡಿದ್ದರು. ಇದನ್ನು ಪ್ರಶ್ನಿಸಿ ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ ತನಿಖಾಧಿಕಾರಿಯನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋಟ್ರ್ಗೆ ಮೇಲ್ಮನವಿ ಸಲ್ಲಿಸಿತ್ತು.
ಇದನ್ನೂ ಓದಿ:ಬಾಡಿಗೆ ತಾಯ್ತನಕ್ಕೆ ಮುಂದಾಗುವವರಿಗೆ ಪರೀಕ್ಷೆಗೊಳಪಡಿಸಿ ಅವಕಾಶ ಕಲ್ಪಿಸಲು ಹೈಕೋರ್ಟ್ ನಿರ್ದೇಶನ