ಬೆಂಗಳೂರು: ವೈದ್ಯರ ಮೇಲೆ ಹಲ್ಲೆ ನಡೆಸಿದ್ದಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಪೊಲೀಸರಿಗೆ ಶರಣಾದ ಹಿನ್ನೆಲೆಯಲ್ಲಿ ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರು ಸತತ 8 ದಿನಗಳ ನಂತರ ಇಂದು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ಸತತ ಮೂರು ತಾಸಿಗೂ ಹೆಚ್ಚು ಸಮಯ ಸಭೆ ನಡೆಸಿದ ಬಳಿಕ ಪ್ರತಿಭಟನೆ ಹಿಂಪಡೆಯುವುದಾಗಿ ಘೋಷಿಸಿದ್ದಾರೆ.
ಕಳೆದ 8 ದಿನಗಳಿಂದ ಕಿರಿಯ ಹಾಗೂ ತರಬೇತಿ ವೈದ್ಯರ ಪ್ರತಿಭಟನೆಯ ಕಿಚ್ಚು ಹೆಚ್ಚಾಗ್ತಿದ್ದಂತೆ, ಕರವೇ ಕಾರ್ಯಕರ್ತರು ಇಂದು ದಕ್ಷಿಣ ವಿಭಾಗದ ಡಿಸಿಪಿ ಕಚೇರಿಗೆ ಬಂದು ಶರಣಾದರು. ಅಲ್ಲಿಂದ ವಿ.ವಿ.ಪುರಂ ಪೊಲೀಸರು ಕರವೇ ಕಾರ್ಯಕರ್ತರನ್ನ ವಶಕ್ಕೆ ಪಡೆದು, ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ನಂತರ 24ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದರು. ಇನ್ನು, ಕರವೇ ಕಾರ್ಯಕರ್ತರ ಹಲ್ಲೆ ಖಂಡಿಸಿ, ಪ್ರಧಾನಿಯವರ ಗಮನ ಸೆಳೆಯಲು ವೈದ್ಯರು ಪ್ರಧಾನಿಗೆ ಅಂಚೆ ಪತ್ರವನ್ನೂ ಬರೆದರು.