ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಈ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರನ್ನು ಭೇಟಿ ಆಗುತ್ತೇನೆ. ಶ್ರೀನಗರದಲ್ಲಿ ತ್ರಿವರ್ಣಧ್ವಜ ಹಾರಿಸಿ ಬಂದ ರಾಷ್ಟ್ರ ಭಕ್ತ ನಾನು. ಇವರ ರೀತಿ ನಾನು ಲೂಟಿ ಮಾಡಿ ಜೈಲಿಗೆ ಹೋಗಿಲ್ಲ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ, ಭಾಗವಧ್ವಜ ಹಾರಿಸಿದ್ರು ಅಂತಾ ಸುಳ್ಳು ಹೇಳಿದ್ರು. ಕೇಸರಿ ಶಾಲು ಯಾವ ಲಾರಿಯಲ್ಲಿ ಬಂತೆಂದು ಗೊತ್ತಿದೆ ಅಂತಾ ಸುಳ್ಳು ಹೇಳಿದ್ರು. ನಿನ್ನೆ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ವಿಧಾನಮಂಡಲದ ಇತಿಹಾಸದಲ್ಲೇ ಇದು ಕಪ್ಪು ಚುಕ್ಕೆ. ಮುಖ್ಯಮಂತ್ರಿ, ಗೃಹ ಸಚಿವರ ಬಳಿ ಮಾತನಾಡಿದ್ದೇನೆ. ಈ ಬಗ್ಗೆ ಕ್ರಿಮಿನಲ್ ಕೇಸ್ ಹಾಕಬೇಕು, ರಾಷ್ಟ್ರ ದ್ರೋಹದ ಕೇಸ್ ಹಾಕಬೇಕು ಅಂತಾ ಒತ್ತಾಯಿಸಿದ್ದೇನೆ ಎಂದರು. ಅಲ್ಲದೇ ಯಾರಾದರೂ ತಾಯಿ ಎದೆಹಾಲು ಕುಡಿದವರು ಇದ್ರೆ ಪಾಕಿಸ್ತಾನದ ದ್ವಜ ತೆಗೆದು ತ್ರಿವರ್ಣ ಧ್ವಜ ಹಾರಿಸುವಂತೆ ಸವಾಲು ಹಾಕಿದರು.
ಇದನ್ನೂ ಓದಿ:ಸದನದಲ್ಲಿ ರಾಷ್ಟ್ರಧ್ವಜ ಪ್ರದರ್ಶಿಸಿ ಧ್ವಜಸಂಹಿತೆಯನ್ನು ಕಾಂಗ್ರೆಸ್ ಉಲ್ಲಂಘಿಸಿದೆ : ಸಿಎಂ
1992ರಲ್ಲಿ ರಾಜ್ಯದ ಕೇಸರಿ ವಾಹಿನಿಯ ಮುಖ್ಯಸ್ಥರಾಗಿ ಹೋಗಿ ತ್ರಿವರ್ಣ ಧ್ವಜ ಹಾರಿಸಿ ಬಂದಿದ್ದೇನೆ. ತಾಯಿ ಎದೆ ಹಾಲು ಕುಡಿದವರು ನಾವು ಅಂತಾ ತೋರಿಸಿ, ಪಾಕ್ ಧ್ವಜ ಕಿತ್ತು ಹಾಕಿ ಬಂದವರು ನಾವು. ರಾಷ್ಟ್ರ ದ್ರೋಹಿ ಡಿಕೆಶಿಯವರು ಈ ರೀತಿ ರಾಷ್ಟ್ರಧ್ವಜವನ್ನ ದುರುಪಯೋಗ ಮಾಡಿಕೊಂಡು ಕುತಂತ್ರ ರಾಜಕಾರಣ ಮಾಡ್ತಿದ್ದಾರೆ. ಇವರ ರೀತಿ ಲೂಟಿ ಮಾಡಿ ಜೈಲಿಗೆ ಹೋದವರಲ್ಲ ನಾವು. ನೀವು ಯಾಕೆ ಜೈಲಿಗೆ ಹೋಗಿಬಂದ್ರಿ ಅಂತಾ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.