ಬೆಂಗಳೂರು :ಬರ ಪರಿಸ್ಥಿತಿಯನ್ನು ಸಮಪರ್ಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆ.ಸಿ ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿಯಂತಹ ಯೋಜನೆಗಳಿಂದ ರಾಜ್ಯದ ಬಯಲು ಸೀಮೆಯ 164 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ತಿಳಿಸಿದರು.
ವಿಕಾಸಸೌಧದಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಇತ್ತೀಚೆಗೆ ಪ್ರಕಟವಾಗಿರುವ ಕೇಂದ್ರ ಸರ್ಕಾರದ 6ನೇ ನೀರಾವರಿ ಗಣತಿಯ ಕುರಿತು 2017-18 ರಲ್ಲಿ ಸಮೀಕ್ಷೆ ನಡೆಸಲಾಗಿದೆ. ಆ ವರ್ಷದಲ್ಲಿ ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಬರದ ಪರಿಸ್ಥಿತಿ ಇತ್ತು. ನಂತರದ ವರ್ಷಗಳಲ್ಲಿ ರಾಜ್ಯಾದ್ಯಂತ ಕೈಗೊಂಡಿರುವ ಕೆರೆಗಳನ್ನು ತುಂಬುವ ಏತ ನೀರಾವರಿ ಯೋಜನೆಗಳಿಂದಾಗಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂತರ್ಜಲ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ 700 ಕೆರೆಗಳನ್ನು ನದಿಗಳಿಂದ, ಕಾಲುವೆಗಳಿಂದ ಹಾಗೂ ಬೆಂಗಳೂರು ನಗರದಲ್ಲಿ ಲಭ್ಯವಿರುವ ಎರಡನೇ ಹಂತದ ಸಂಸ್ಕರಿಸಿದ ನೀರು ಬಳಸಿ ತುಂಬಿಸಲು ಕ್ರಮವಹಿಸಲಾಗಿದೆ. ಇವುಗಳಲ್ಲಿ ಕೆ.ಸಿ ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿ ಏತ ನೀರಾವರಿ ಯೋಜನೆಗಳು ಪ್ರಮಖವಾದವುಗಳು. ಇದಲ್ಲದೇ, ರಾಜ್ಯಾದ್ಯಂತ ಕೈಗೊಂಡಿರುವ ಹಲವಾರು ಯೋಜನೆಗಳ ಹಿನ್ನೆಲೆಯಲ್ಲಿ ರಾಜ್ಯದ 164 ತಾಲೂಕುಗಳಲ್ಲಿ ಅಂತರ್ಜಲ ಪ್ರಮಾಣ ಏರಿಕೆಯಾಗಿದೆ (ಜುಲೈ 2023 ರ ಅಂಕಿ - ಅಂಶ). ಮಲೆನಾಡಿನ ತಾಲೂಕುಗಳಿಗೆ ಹೋಲಿಸಿದಲ್ಲಿ ಬಯಲು ಸೀಮೆಯ ತಾಲೂಕುಗಳಲ್ಲಿ ಅಂತರ್ಜಲ ಹೆಚ್ಚಾಗಿದೆ" ಎಂದು ಹೇಳಿದರು.
2022 -23 ನೇ ಉಲ್ಲೇಖಿತ ವರ್ಷವನ್ನಾಧರಿಸಿ ಕೇಂದ್ರ ಸರ್ಕಾರದ 7 ನೇ ಸಣ್ಣ ನೀರಾವರಿ ಗಣತಿ ಕಾರ್ಯವು ಸದ್ಯದಲ್ಲೇ ಪ್ರಾರಂಭವಾಗಲಿದೆ. 2017 - 18 ನೇ ಸಾಲಿನ ನಂತರದ ಸಣ್ಣ ನೀರಾವರಿ ಯೋಜನೆಗಳ ಸಾಧನೆ 7 ನೇ ನೀರಾವರಿ ಗಣತಿಯಲ್ಲಿ ಪರಿಗಣಿಸಲ್ಪಡುತ್ತವೆ. ಹಾಗೂ ರಾಜ್ಯದ ಉತ್ತಮ ಸಾಧನೆ ಇಲ್ಲಿ ಪ್ರತಿಫಲವಾಗುವ ನಿರೀಕ್ಷೆಯಿದೆ ಎಂದರು.
ಬರ ಪರಿಸ್ಥಿತಿ ನಿರ್ವಹಣೆಗಾಗಿ ಇಲಾಖೆ ಸಜ್ಜು : ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 3,673 ಕೆರೆಗಳಿವೆ. ಏತ ನೀರಾವರಿ ಯೋಜನೆಗಳ ಮೂಲಕ ಇವುಗಳನ್ನು ತುಂಬಿಸುವ ಕಾರ್ಯ ನಡೆಯುತ್ತದೆ. ಈ ಬಾರಿ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಲ್ಲಿ ನೀರು ತುಂಬಿಲ್ಲ. ಅಂಕಿ- ಅಂಶಗಳನ್ನು ಪರಿಗಣಿಸಿದಲ್ಲಿ ಶೇಕಡಾ 30 ಕ್ಕೂ ಕಡಿಮೆ ನೀರು ಶೇಖರಣೆ ಇರುವ ಕೆರೆಗಳ ಸಂಖ್ಯೆ 334. ಇದರ ಶೇಕಡಾವಾರು ಗಮನಿಸಿದಲ್ಲಿ ಇದು ಕೇವಲ 9%. ಆಗಸ್ಟ್ 24 ರಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆ ವಿಸ್ತ್ರತ ಸಭೆ ನಡೆಸಿ ವಸ್ತುಸ್ಥಿತಿಯ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ಹೇಳಿದರು.
ಕೆರೆಗಳಲ್ಲಿ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಣ್ಣ ನೀರಾವರಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ವ್ಯಾಪ್ತಿಯಲ್ಲಿನ ಕೆರೆಗಳ ತೂಬುಗಳಿಂದ ಕೃಷಿ ಚಟುವಟಿಕೆಗಳಿಗೆ ನೀರನ್ನು ಹರಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿರ್ಭಂದಿಸಲಾಗಿದೆ. ಇದೇ ಸಮಯದಲ್ಲಿ ಕುಡಿಯುವ ನೀರಿನ ಅವಶ್ಯಕತೆಗೆ ಹೆಚ್ಚಿನ ಒತ್ತು ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.