ಬೆಂಗಳೂರು:ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆಡಳಿತಾರೂಢ ಬಿಜೆಪಿ ಹೀನಾಯ ಸೋಲು ಕಂಡಿದೆ. ತೀವ್ರ ಮುಖಭಂಗ ಅನುಭವಿಸುವ ಮೂಲಕ ಅಧಿಕಾರ ಕಳೆದುಕೊಂಡಿದೆ. 64 ಸ್ಥಾನಗಳಲ್ಲಿ ಮಾತ್ರ ಕೇಸರಿ ಪಕ್ಷ ಗೆಲುವು ಕಂಡಿದೆ. ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದ 12 ಮಂದಿ ಸಚಿವರು ಸೋಲು ಕಂಡಿರುವುದು ಆಡಳಿತ ವಿರೋಧಿ ಅಲೆಗೆ ಸಾಕ್ಷಿ ಎಂದೇ ವಿಶ್ಲೇಷಿಸಲಾಗುತ್ತಿದೆ.
ಸಿಎಂ ಬೊಮ್ಮಾಯಿ ಅವರು ಹಾವೇರಿಯ ಶಿಗ್ಗಾಂವಿಯಲ್ಲಿ ಗೆಲುವು ಸಾಧಿಸಿದ್ದರೆ, ಅವರ ಸಂಪುಟದ ಸಚಿವರು ಸಾಲು ಸಾಲಾಗಿ ಸೋಲಿನ ಕಹಿ ಅನುಭವಿಸಿದ್ದಾರೆ. ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್, ಬಿ. ಶ್ರೀರಾಮುಲು ಸೇರಿದಂತೆ ಅನೇಕ ಸಚಿವರು ಸೋತಿದ್ದಾರೆ.
12 ಸಚಿವರಿಗೆ ಸೋಲು:ಆರೋಗ್ಯ ಇಲಾಖೆ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ ಸೋಲುಂಡಿದ್ದಾರೆ. ಸುಧಾಕರ್ 19,815 ಮತಗಳನ್ನು ಪಡೆದರೆ, ಕೈ ಅಭ್ಯರ್ಥಿ ಪ್ರದೀಪ್ ಈಶ್ವರ್ 86,224 ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ.
ಗದಗ ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ಶಂಕರ್ ಪಾಟೀಲ್ ಮುನೇನಕೊಪ್ಪ ವಿರುದ್ಧ ಕಾಂಗ್ರೆಸ್‌ನ ಎನ್.ಎಚ್.ಕೋನರೆಡ್ಡಿ ಗೆಲುವು ಸಾಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದಲ್ಲಿ ಸಚಿವ ಹಾಲಪ್ಪ ಆಚಾರ್ 77,149 ಪಡೆದು ಸೋಲು ಕಂಡರೆ, ಕಾಂಗ್ರೆಸ್‌ನ ರಾಯರೆಡ್ಡಿ 94,330 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಬಿ.ಸಿ.ನಾಗೇಶ್ (ತಿಪಟೂರು): ಪ್ರಾಥಮಿಕ ಇಲಾಖೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೋಲು ಕಂಡಿದ್ದಾರೆ. ನಾಗೇಶ್ 54,347 ಮತ ಗಳಿಸಿದರೆ, ಕಾಂಗ್ರೆಸ್‌ನ ಷಡಕ್ಷರಿ 71,999 ಮತಗಳನ್ನು ಸಂಪಾದಿಸಿದ್ದಾರೆ. ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಕಣಕ್ಕಿಳಿದಿದ್ದ ಕಂದಾಯ ಸಚಿವ ಆರ್. ಅಶೋಕ ಸೋಲು ಕಂಡಿದ್ದಾರೆ. ಆದರೆ ಬೆಂಗಳೂರಿನ ಪದ್ಮನಾಭನಗರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ.