ಕರ್ನಾಟಕ

karnataka

ETV Bharat / state

ಸಿಎಂ ಸಿದ್ದರಾಮಯ್ಯ ಬಜೆಟ್​ ಕೊಂಡಾಡಿದ ಸಚಿವರು: ಎಂ..ಬಿ ಪಾಟೀಲ್, ಲಕ್ಷ್ಮಿ ಹೆಬ್ಬಾಳಕರ್, ಈಶ್ವರ ಖಂಡ್ರೆ ಹೇಳಿದ್ದೇನು? - ಸಚಿವ ಈಶ್ವರ ಖಂಡ್ರೆ

ನಮ್ಮ ಬಜೆಟ್​ ಅನ್ನು ಕಂಡು ಈಗಾಗಲೇ ಜನರಿಂದ ತಿರಸ್ಕೃತರಾಗಿರುವ ಬಿಜೆಪಿ ಮತ್ತಷ್ಟು ಹತಾಶವಾಗಿದೆ ಎಂದು ಎಂ.ಬಿ ಪಾಟೀಲ್​ ಹೇಳಿದ್ದಾರೆ.

Eministers-reaction-on-cm-siddaramaiah-budget
ಸಿಎಂ ಸಿದ್ದರಾಮಯ್ಯ ಬಜೆಟ್​ಅನ್ನು ಕೊಂಡಾಡಿದ ಸಚಿವರು: ಎಂ..ಬಿ ಪಾಟೀಲ್, ಲಕ್ಷ್ಮೀ ಹೆಬ್ಬಾಳಕರ್, ಈಶ್ವರ ಖಂಡ್ರೆ ಹೇಳಿದ್ದೇನು?

By

Published : Jul 7, 2023, 11:01 PM IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿರುವ ಬಜೆಟ್ ಬಗ್ಗೆ ಅವರ ಸಂಪುಟ ಸಚಿವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಚಿವರಾದ ಎಂ ಬಿ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಶಿವರಾಜ್ ತಂಗಡಗಿ ಸೇರಿದಂತೆ ಹಲವು ಸಚಿವರು ತಮ್ಮ ಮೆಚ್ಚುಗೆಯನ್ನು ಮಾಧ್ಯಮ ಪ್ರಕಟಣೆ ಮೂಲಕ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಜನಪರ ಬಜೆಟ್‌ - ಎಂ ಬಿ ಪಾಟೀಲ್:ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆಯ 14ನೇ ಬಾರಿಗೆ ಮಂಡಿಸಿರುವ ಬಜೆಟ್‌ ಮಹಿಳೆಯರು, ದಲಿತರು, ರೈತರು ಅಲ್ಪಸಂಖ್ಯಾತರು, ಬಹುಸಂಖ್ಯಾತರು ಮತ್ತು ಉದ್ದಿಮದಾರರು ಸೇರಿದಂತೆ ಸಮಾಜದ ಎಲ್ಲಾ ಸಮುದಾಯಗಳ ಒಳಿತಿನ ಬಗ್ಗೆ ಗಮನ ಹರಿಸಿರುವ ಜನಪರ ಬಜೆಟ್‌ ಆಗಿದೆ. ಜತೆಗೆ, ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರಕಾರ ಮಾಡಿದ ಅಕ್ರಮಗಳನ್ನು ಇದು ರಾಜ್ಯದ ಜನರಿಗೆ ತೋರಿಸಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ನಾವು ಚುನಾವಣೆಗೆ ಮೊದಲೇ ಮಾತು ಕೊಟ್ಟಿದ್ದಂತೆ ಐದೂ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದ್ದೇವೆ. ಬಜೆಟ್‌ನಲ್ಲಿ ಇದಕ್ಕೆ ಒಟ್ಟು 52 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ. ರಾಜ್ಯಕ್ಕೆ ಹೇಗೆ ಆದಾಯ ತರಬೇಕೆಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ನಮ್ಮ ಬಜೆಟ್​ ಅನ್ನು ಕಂಡು ಈಗಾಗಲೇ ಜನರಿಂದ ತಿರಸ್ಕೃತರಾಗಿರುವ ಬಿಜೆಪಿ ಮತ್ತಷ್ಟು ಹತಾಶವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇತಿಹಾಸದಲ್ಲೇ ಅಪರೂಪದ ಬಜೆಟ್ - ಹೆಬ್ಬಾಳಕರ್:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ 2023 -24ನೇ ಸಾಲಿನ ಆಯವ್ಯಯ ಇತಿಹಾಸದಲ್ಲೇ ಅತ್ಯಪರೂಪವಾದದ್ದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಣ್ಣಿಸಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಕಾಂಗ್ರೆಸ್ ಧ್ಯೇಯ ಬಜೆಟ್ ನಲ್ಲಿ ಪ್ರತಿಬಿಂಬಿತವಾಗಿದೆ. ಪ್ರಾದೇಶಿಕವಾಗಿ ನೋಡಿದರೂ, ಇಲಾಖಾವಾರು ನೋಡಿದರೂ ಎಲ್ಲ ದೃಷ್ಟಿಯಿಂದಲೂ ಬಜೆಟ್ ಅತ್ಯಂತ ಸಮತೋಲಿತವಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ನೀಡಿದ ಎಲ್ಲ ಗ್ಯಾರಂಟಿ ಯೋಜನೆಗಳ ಜಾರಿಗೆ ಅತ್ಯಂತ ವ್ಯವಸ್ಥಿತವಾಗಿ, ಯಾವುದೇ ವರ್ಗದವರಿಗೂ ಹೊರೆಯಾಗದ ರೀತಿಯಲ್ಲಿ ಹಣ ಹೊಂದಿಸಲಾಗಿದೆ. ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುವ ಸರಕಾರ ಎನ್ನುವುದನ್ನು ಜನಮಾನಸದಲ್ಲಿ ಮೂಡಿಸಲು ಯಶಸ್ವಿಯಾಗಿದ್ದಾರೆ. ಈ ಬಜೆಟ್ ಅನುಷ್ಠಾನದೊಂದಿಗೆ ಮುಂದಿನ 5 ವರ್ಷದಲ್ಲಿ ರಾಜ್ಯ ಅತ್ಯಂತ ವೇಗವಾಗಿ, ಸಮೃದ್ಧವಾಗಿ ಬೆಳವಣಿಗೆ ಸಾಧಿಸಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳವಣಿಗೆಗೆ ಪೂರಕ ಹೃದಯಸ್ಪರ್ಶಿ ಬಜೆಟ್ - ಖಂಡ್ರೆ:ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಅವರಿಂದು ಮಂಡಿಸಿರುವ 2023-24ನೇ ಸಾಲಿನ ಆಯವ್ಯಯ ಬಡವರು, ಮಧ್ಯಮ ವರ್ಗದ ಜನರ ಅವಶ್ಯಕತೆಗೆ ಪೂರಕವಾದ ಹಾಗೂ ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾದ ಸರ್ವಸ್ಪರ್ಶಿ ಬಜೆಟ್‌ ಆಗಿದೆ. 14ನೇ ಬಾರಿಗೆ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು, ಎಲ್ಲ ಗ್ಯಾರಂಟಿಗಳ ಅನುಷ್ಠಾನದ ಸ್ಪಷ್ಟ ಮುನ್ನೋಟದೊಂದಿಗೆ, ಜನರಿಗೆ ಹೊರೆಯಾಗದಂತಹ ಬಜೆಟ್ ಮಂಡಿಸಿದ್ದಾರೆ. ಜೊತೆಗೆ ಕೃಷಿ, ಉದ್ಯೋಗ ಸೃಷ್ಟಿ, ಬಂಡವಾಳ ಆಕರ್ಷಣೆಗೆ ಒತ್ತು ನೀಡಿದ್ದಾರೆ ಇದೊಂದು ದೂರದರ್ಶಿತ್ವದ ಬಜೆಟ್ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯ ಪಟ್ಟಿದ್ದಾರೆ.

ರೈತರ, ಕಾರ್ಮಿಕರ ಹಿತಕಾಯುವ ಈ ಬಜೆಟ್, ಮಹಿಳೆಯರ ಮತ್ತು ದುರ್ಬಲರ ಸಬಲೀಕರಣಕ್ಕೂ ಸಾಕಷ್ಟು ಆದ್ಯತೆ ನೀಡಿದೆ. ಸಾಮಾಜಿಕ ನ್ಯಾಯವನ್ನೂ ಎತ್ತಿಹಿಡಿದಿದೆ. ಮುಖ್ಯಮಂತ್ರಿಯವರು ತಮ್ಮ ಸುದೀರ್ಘ ಅನುಭವವನ್ನು ಈ ಬಜೆಟ್ ನಲ್ಲಿ ಧಾರೆ ಎರೆದಿದ್ದು, ಕಲ್ಯಾಣ ರಾಜ್ಯದ ಕನಸು ನನಸು ಮಾಡುವ ಸಂಯಕ್ ನೋಟವನ್ನು ಮುಂದಿಟ್ಟಿದ್ದಾರೆ. ಹಿಂದಿನ ಸರ್ಕಾರ ವಿತ್ತೀಯ ಶಿಸ್ತಿನ ನೀತಿಗಳನ್ನು ಗಾಳಿಗೆ ತೂರಿತ್ತು. ಅದನ್ನು ಸರಿದಾರಿಗೆ ತರುವ ಮತ್ತು 1 ಟ್ರಿಲಿಯನ್ ಆರ್ಥಕ ರಾಜ್ಯ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಸರ್ವರಿಗೂ ಸಮಪಾಲಿನ ಬಜೆಟ್- ತಂಗಡಗಿ:ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ 14ನೇ ಆಯವ್ಯಯ ಐತಿಹಾಸಿಕ ಬಜೆಟ್ ಆಗಿದ್ದು,‌‌ ನಡೆದಂತೆ ನುಡಿದಿರುವ 'ಅನ್ನರಾಮಯ್ಯ'ರಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಖೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಬಣ್ಣಿಸಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಬಜೆಟ್ ನಲ್ಲಿ ಬಸವಣ್ಣನವರ ಕಾಯಕ ಮತ್ತು ದಾಸೋಹ ಸ್ಮರಿಸಿದ್ದು, ಜನ ಸಾಮಾನ್ಯರಿಗೆ ಹೊರೆಯಾಗದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ತತ್ವದಡಿ ಉತ್ತಮ ಬಜೆಟ್ ನೀಡಿದ್ದಾರೆ ತಿಳಿಸಿದ್ದಾರೆ.

ಇದನ್ನೂ ಓದಿ:ಕರ್ನಾಟಕಕ್ಕೆ 50 ವರ್ಷ ಪೂರ್ಣ: 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂಬ ಹೆಸರಿನಲ್ಲಿ ಇಡೀ ವರ್ಷ ಕಾರ್ಯಕ್ರಮ

ABOUT THE AUTHOR

...view details