ಬೆಂಗಳೂರು :ಪರಿಷತ್ ಚುನಾವಣೆಯಲ್ಲಿ ಕೋಲಾರ ಬಿಜೆಪಿ ಅಭ್ಯರ್ಥಿ ವೇಣುಗೋಪಾಲ ಗೆಲುವಿಗೆ ಆಪರೇಷನ್ ಕಮಲ ತಂತ್ರ ನಡೆಸಿರುವ ವಲಸಿಗ ನಾಯಕರು ಇಂದು ಮುಖ್ಯಮಂತ್ರಿ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದರು. ಕಾಂಗ್ರೆಸ್ ಮತ ಸೆಳೆಯುವ ಕುರಿತು ಸಮಾಲೋಚಿಸಿದರು.
ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರ ಬಿಜೆಪಿ ಸೇರ್ಪಡೆ ಬೆನ್ನಲ್ಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಮಹತ್ವದ ಸಭೆ ನಡೆಯಿತು.
ಒಂದು ಕಾಲದಲ್ಲಿ ಸಿದ್ದರಾಮಯ್ಯ ಆಪ್ತರಾಗಿದ್ದ ವರ್ತೂರು ಪ್ರಕಾಶ್ ಮತ್ತು ಬೆಂಬಲಿಗರನ್ನು ನಿವಾಸಕ್ಕೆ ಕರೆಸಿಕೊಂಡ ಸಿಎಂ, ಪರಿಷತ್ ಚುನಾವಣೆ ಕುರಿತು ಮಾತುಕತೆ ನಡೆಸಿದರು.
ಕೋಲಾರದಲ್ಲಿ ಕೈ ನಾಯಕರು ಬಿಜೆಪಿ ಸೇರ್ಪಡೆ ಕುರಿತಂತೆ ಸಚಿವ ಸುಧಾಕರ್ ಮಾತನಾಡಿರುವುದು.. ಚಿಕ್ಕಬಳ್ಳಾಪುರ ಉಸ್ತುವಾರಿ ಸುಧಾಕರ್ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಮುನಿರತ್ನ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೋಲಾರ ಪರಿಷತ್ ಕ್ಷೇತ್ರ ಗೆಲ್ಲುವ ಕುರಿತ ಕಾರ್ಯತಂತ್ರಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಕೋಲಾರ ಗೆಲ್ಲುವ ಜವಾಬ್ದಾರಿ ತೆಗೆದುಕೊಂಡಿರುವ ಸುಧಾಕರ್ ಮತ್ತು ಮುನಿರತ್ನ ಅವರು ಜಿಲ್ಲೆಯಲ್ಲಿನ ಕಾಂಗ್ರೆಸ್ ಮತಪೆಟ್ಟಿಗೆಗೆ ಕೈಹಾಕಲು ಸ್ಕೆಚ್ ಹಾಕಿದ್ದಾರೆ. ಅದಕ್ಕೆ ಸಂಬಂಧಪಟ್ಟ ವಿವರಗಳನ್ನು ಸಿಎಂಗೆ ತಿಳಿಸಿದರು.
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಕೋಲಾರ ಗ್ರಾಮ ಪಂಚಾಯತ್ ಸದಸ್ಯರ ಸಭೆ ಮಾಡುವ ಹಿನ್ನೆಲೆಯಲ್ಲಿ ಇಂದು ಸಿಎಂ ಭೇಟಿ ಮಾಡಿದ್ದೇವೆ. ವಿಧಾನ ಪರಿಷತ್ ಚುನಾವಣೆಗೆ ಸೀಮಿತವಾಗಿ ಸಭೆ ಮಾಡಲಾಗಿದೆ ಎಂದರು.
ಕೋಲಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ಬಿಜೆಪಿ ಸೇರಿದ್ದಕ್ಕೆ ಕಾಂಗ್ರೆಸ್ ರಿವರ್ಸ ಆಪರೇಷನ್ ಮಾಡುವುದಾಗಿ ಹೇಳಿದೆ. ಆದರೆ, ಒಬ್ಬ ಜಿಲ್ಲಾಧ್ಯಕ್ಷ ಮೂವತ್ತು ವರ್ಷ ಕೆಲಸ ಮಾಡಿ ಕಾಂಗ್ರೆಸ್‌ನಲ್ಲಿ ಮನನೊಂದು ಬಿಜೆಪಿ ಸೇರಿದ್ದಾರೆ. ಚಂದ್ರಾರೆಡ್ಡಿ ಸೇರ್ಪಡೆಯಿಂದ ಕೋಲಾರ ಭಾಗದಲ್ಲಿ ನೈತಿಕ ಜಯ ಸಿಕ್ಕಿದೆ.
ಚಂದ್ರಾರೆಡ್ಡಿ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತ. ಅಂತವರು ಮನನೊಂದು ಕಾಂಗ್ರೆಸ್ ಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರು ಯಾರ್ಯಾರನ್ನು ಅವರ ಮನೆಯಲ್ಲಿ ಇಟ್ಟುಕೊಳ್ಳಬೇಕು ಅದು ಕಾಂಗ್ರೆಸ್‌ಗೆ ಬಿಟ್ಟ ವಿಚಾರ, ನಾವೇನು ಯಾರನ್ನು ಒತ್ತಾಯ ಪೂರ್ವಕವಾಗಿ ಕರೆದಿಲ್ಲ. ಚಂದ್ರಾರೆಡ್ಡಿ ಸ್ವಯಂ ಪ್ರೇರಣೆಯಿಂದ ಬಿಜೆಪಿ ಸೇರಿದ್ದಾರೆ ಎಂದರು.
ಚಂದ್ರಾರೆಡ್ಡಿ ಸ್ಥಾನಮಾನದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸುಧಾಕರ್, ಅವರು ಈಗ ಬಿಜೆಪಿ ಸೇರ್ಪಡೆಯಾಗುದ್ದಾರೆ. ಅವರ ಶಕ್ತಿ ಮತ್ತು ಸಂಘಟನೆ ಸಹಕಾರದ ಮೇಲೆ ಸ್ಥಾನಮಾನ ಸಿಗುತ್ತದೆ. ಅದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.