ಬೆಂಗಳೂರು:ಸಿಎಂ ಯಡಿಯೂರಪ್ಪ ಸಂಪುಟ ರಚನೆ ಮಾಡಿದ್ದು, ಇದೀಗ ಖಾತೆ ಹಂಚಿಕೆಯ ಜಟಾಪಟಿ ನಡೆಯುತ್ತಿದೆ. ಅದರ ಬೆನ್ನಲ್ಲೇ ವಿಧಾನಸೌಧದಲ್ಲಿ ಕೊಠಡಿ ಗಿಟ್ಟಿಸಿಕೊಳ್ಳುವಲ್ಲಿಯೂ ಸಚಿವರುಗಳು ಪೈಪೋಟಿ ನಡೆಸುತ್ತಿದ್ದಾರೆ.
ಅದರಲ್ಲೂ ವಿಧಾನಸೌಧದ ಪಶ್ಚಿಮ ದಿಕ್ಕಿಗಿರುವ 3ನೇ ಮಹಡಿಯಲ್ಲಿನ ಕೊಠಡಿ ಪಡೆಯಲು ಹಿರಿಯ ಸಚಿವರುಗಳು ನಾಮುಂದು ತಾಮುಂದು ಎಂದು ಸ್ಪರ್ಧೆಗೆ ಬಿದ್ದಿದ್ದಾರೆ. ಇನ್ನು ಕೆಲವರು ತಮ್ಮ ಅದೃಷ್ಟದ ಕೊಠಡಿ ನೀಡುವಂತೆ ಒತ್ತಾಯಿಸುತ್ತಿದ್ದರೆ, ಇನ್ನು ಕೆಲವರು ಅದೃಷ್ಟ ಸಂಖ್ಯೆಯ ಕೊಠಡಿಯತ್ತ ಚಿತ್ತ ನೆಟ್ಟಿದ್ದಾರೆ. ಇನ್ನು ಕೆಲ ಹಿರಿಯ ಸಚಿವರುಗಳು ತಾವು ಈ ಹಿಂದೆ ಸಚಿವರಾಗಿದ್ದ ವೇಳೆ ನೀಡಿದ್ದ ಕೊಠಡಿಯನ್ನೇ ಈ ಬಾರಿಯೂ ಕೊಡುವಂತೆ ಮನವಿ ಮಾಡುತ್ತಿದ್ದಾರೆ. ಈಗಾಗಲೇ ಸಚಿವರುಗಳಿಗೆ ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿದೆ. ಆದರೆ, ತಮಗೆ ತಮ್ಮ ಅದೃಷ್ಟದ ಕೊಠಡಿ, ಈ ಹಿಂದೆ ನೀಡಿದ್ದ ಕೊಠಡಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಈ ಸಂಬಂಧ ಸಚಿವರುಗಳ ಪಿಎಸ್‌ಗಳು ಶಕ್ತಿಸೌಧದ ಕಾರಿಡಾರ್‌ನಲ್ಲಿ ಕೊಠಡಿ ಬದಲಾವಣೆಗಾಗಿ ಓಡಾಡುತ್ತಿದ್ದಾರೆ. ಇತ್ತ ಕೊಠಡಿ ಹಂಚಿಕೆ ಮಾಡುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ಸಚಿವರುಗಳ ಕೊಠಡಿ ಬದಲಾವಣೆ ಮನವಿಯಿಂದ ಗೊಂದಲಕ್ಕೀಡಾಗಿದ್ದಾರೆ.
ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿ.ಸೋಮಣ್ಣಗೆ ಹಂಚಿಕೆಯಾದ ಕೊಠಡಿ ಮೇಲೆ ಚಿತ್ತ ನೆಟ್ಟಿದ್ದಾರೆ. ಈ ಹಿಂದೆ ಸಚಿವರಾಗಿದ್ದಾಗ ಕೆ.ಎಸ್.ಈಶ್ವರಪ್ಪ ಅವರು 314, 314A ಕೊಠಡಿಯಲ್ಲಿ ಇದ್ದರು. ಇದೀಗ ಆ ಕೊಠಡಿಯನ್ನು ಸಚಿವ ವಿ.ಸೋಮಣ್ಣಗೆ ಹಂಚಿಕೆ ಮಾಡಲಾಗಿದೆ. ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕೊಠಡಿ ಸಂಖ್ಯೆ 329A ನ್ನು ನೀಡಲಾಗಿದೆ. ಒಂದು ವೇಳೆ ವಿ.ಸೋಮಣ್ಣ ಒಪ್ಪಿದರೆ, ಇಬ್ಬರು ಪರಸ್ಪರ ಕೊಠಡಿ ಬದಲಾಯಿಸಬಹುದಾಗಿದೆ. ಇಲ್ಲವಾದರೆ ಸಿಎಂ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ.