ಬೆಂಗಳೂರು: ಸ್ಯಾಂಡಲ್ವುಡ್ನಿಂದ ಮರೆಯಾದ ಖ್ಯಾತ ಹಿರಿಯ ನಟ ದಿ. ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ರೂ. ನೀಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಮಾಧ್ಯಮಗೋಷ್ಟಿಯಲ್ಲಿ ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾಹಿತಿ ನೀಡಿದರು. ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಅಲ್ಲದೆ ಖ್ಯಾತ ಹಿರಿಯ ನಟ ಡಾ. ಎಂ.ಎಚ್. ಅಂಬರೀಶ್ ಸ್ಮಾರಕವನ್ನು ಕಂಠೀರವ ಸ್ಟುಡಿಯೋ ಆವರಣದಲ್ಲಿ 12 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿರುವ ಇತರ ವಿಷಯಗಳು:
ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನೂತನ ನ್ಯಾಯಾಲಯ, ಸಂಕೀರ್ಣ ನಿರ್ಮಾಣ ಕಾಮಗಾರಿಗೆ 19.73 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ.
ಜಲ ಜೀವನ್ ಮಿಷನ್: ಜಲ ಜೀವನ್ ಮಿಷನ್ ಅನುದಾನ ಮತ್ತು ವಿಶ್ವಬ್ಯಾಂಕ್ ಹಣಕಾಸಿನ ನೆರವಿನಿಂದ ರಾಜ್ಯಾದ್ಯಂತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಗ್ರಾಮೀಣ ಮನೆಗಳಿಗೆ ಕಾರ್ಯಾತ್ಮಕ ನಳನೀರು ಸಂಪರ್ಕ (FHTC) ಒದಗಿಸುವ ₹9152 ಕೋಟಿಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ. ಮೈಸೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗಳ 2ನೇ ಹಂತದಲ್ಲಿ ಒಳಾಂಗಣ ಮತ್ತು ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು 16.50 ಕೋಟಿ ರೂ.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
300 ಎಲೆಕ್ಟ್ರಾನಿಕ್ ಬಸ್ ಖರೀದಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ರಾಜ್ಯ ಸರ್ಕಾರದ 100 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ ಪ್ರತಿ ಬಸ್ಗೆ ನೀಡುವ ಗರಿಷ್ಠ ಬೇಡಿಕೆ ಪ್ರೋತ್ಸಾಹ ಧನ (Maximum Demand Incentive) ಸೇರಿಸಿಕೊಂಡು 300 Non-AC ಬಸ್ಗಳನ್ನು Gross Cost Contract ಬಿಡ್ಡಿಂಗ್ ಮೂಲಕ OPEX ಮಾದರಿಯಲ್ಲಿ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಆದರೆ, ಈಗ ನಾನ್ ಎಸಿ ಬಿಟ್ಟು ಎಲೆಕ್ಟ್ರಾನಿಕ್ ಬಸ್ಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ವಹಣೆ (ಎರಡನೇ ತಿದ್ದುಪಡಿ) ವಿಧೇಯಕ, 2020ಕ್ಕೆ ಘಟನೋತ್ತರ ಅನುಮೋದನೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಜಲಪಾಶದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ DBFOT ಆಧಾರದಲ್ಲಿ ಐಷಾರಾಮಿ ಹೋಟೆಲ್ ಮತ್ತು ಶರಾವತಿ ನದಿಗೆ ಅಡ್ಡಲಾಗಿ ರೋಪ್ ವೇಯನ್ನು 116 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಒಪ್ಪಿಗೆ ಸೂಚಿಸಲಾಗಿದೆ.
ಮೈಸೂರಿನ ಜೆ.ಪಿ.ನಗರ 12ನೇ ಹಂತದ "ಸಿ" ಬ್ಲಾಕ್ ನಲ್ಲಿ 4732.80 ಚ.ಮೀ. ವಿಸ್ತೀರ್ಣದ ಮೈಸೂರು ನಗರಾಭಿವೃದ್ಧಿ ಸೌಲಭ್ಯ ನಿವೇಶನವನ್ನು ಶ್ರೀ ಸಿದ್ದಲಿಂಗೇಶ್ವರಸ್ವಾಮಿ ಸಮಿತಿ ಟ್ರಸ್ಟ್, ಮೈಸೂರು ಅವರಿಗೆ ದೇವಾಲಯ ನಿರ್ಮಾಣಕ್ಕಾಗಿ 30 ವರ್ಷಗಳ ಅವಧಿಗೆ ಗುತ್ತಿಗೆ ಮೇಲೆ ಹಂಚಿಕೆ ಮಾಡಲಾಗಿದೆ.
ದೇವಾಂಗ ಸಂಘ, ದಾವಣಗೆರೆ ಇವರಿಗೆ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕುಂದವಾಡ ಗ್ರಾಮದ ರಿ.ಸ.ನಂ. 241/1,4,2 ರಲ್ಲಿನ ಅಂತಿಮ ಅನುಮೋದಿತ - ಖಾಸಗಿ ವಸತಿ ಬಡಾವಣೆಯಲ್ಲಿನ ನಾಗರಿಕ ಸೌಲಭ್ಯ ಉದ್ದೇಶಕ್ಕಾಗಿ ಕಾಯ್ದಿರಿಸಿದ ನಿವೇಶನ ಮಂಜೂರಾಗಿದ್ದು, ಪ್ರಾಧಿಕಾರಕ್ಕೆ ಪಾವತಿಸಬೇಕಾಗಿರುವ ಮೊತ್ತದಲ್ಲಿ ರಿಯಾಯಿತಿ ನೀಡಲು ಸಮ್ಮತಿ ನೀಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿ ಅಡಿಯಲ್ಲಿ 2016-17 ಸಾಲಿನಿಂದ ಕೆಲವು ತೆರಿಗೆದಾರರು ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡಿರುವ ಪ್ರಕರಣಗಳಲ್ಲಿ, ಪಾವತಿ ಮಾಡಬೇಕಾದ ವ್ಯತ್ಯಾಸದ ಮೊತ್ತಕ್ಕೆ ದುಪ್ಪಟ್ಟು ದಂಡ ಮತ್ತು ಬಡ್ಡಿಯನ್ನು ತೆರಿಗೆದಾರರು ಪಾವತಿಸಲು ಒಪ್ಪಿಗೆ ನೀಡಲಾಗಿದೆ. ಮಹಾನಗರ 2008 2013-ನೇ ಸಾಲಿನಿಂದ 2020-21ನೇ ಸಾಲಿನವರೆಗೆ ಪಾಲಿಕೆಯ ವ್ಯಾಪ್ತಿಯಲ್ಲಿರುವ ಸ್ವತ್ತುಗಳ ಮೇಲೆ ಶೇ.2 ರಷ್ಟು ನಗರ ಭೂ ಸಾರಿಗೆ ಉಪಕರವನ್ನು ವಿಧಿಸದೇ ಇರುವುದನ್ನು (ಅಂದಾಜು ರೂ. 238 ಕೋಟಿಗಳು) ಮನ್ನಾ ಮಾಡಲು ಸಮ್ಮತಿ ನೀಡಲಾಗಿದೆ.