ಬೆಂಗಳೂರು : ಬಿಜೆಪಿ ಸರ್ಕಾರದ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಸಾಧನಾ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿಎಂ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪನವರು ರಾಜೀನಾಮೆ ಘೋಷಣೆ ಮಾಡಿದ್ದಾರೆ. ಇದಕ್ಕೆ ಅನೇಕ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಬಿಎಸ್ವೈ ರಾಜೀನಾಮೆ ಹಿನ್ನೆಲೆಯಲ್ಲಿ ಸಚಿವರ ಪ್ರತಿಕ್ರಿಯೆ ಯಡಿಯೂರಪ್ಪನವರ ಸೇವೆ ಅವಶ್ಯಕತೆಯಿತ್ತು. ಆದರೆ, ವರಿಷ್ಠರ ನಿರ್ಧಾರಕ್ಕೆ ಮಣಿದು ಅವರು ರಾಜೀನಾಮೆ ನೀಡಿದ್ದಾರೆ. ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧವಾಗಿದ್ದೇವೆ. ಮೂಲ, ವಲಸಿಗರು ಎಂಬುದು ಇಲ್ಲ. ಸಿಎಂ ಯಡಿಯೂರಪ್ಪನವರು ನಮ್ಮನ್ನು ಮನೆ ಮಕ್ಕಳಂತೆ ನೋಡಿಕೊಂಡಿದ್ದಾರೆ.
ನಮಗೂ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇ ತೀರ್ಮಾನ ಮಾಡಿದ ಮೇಲೆ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು. ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಕೆಲವು ನಾಯಕರು ಅಧಿಕಾರದಿಂದ ನಾಯಕರಾಗಿರುತ್ತಾರೆ.
ಎರಡು ವರ್ಷ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ವರಿಷ್ಠರ ಸೂಚನೆ ಪಾಲನೆ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡಿ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಮಾರ್ಗದರ್ಶನ ನಮಗೆ ಸದಾಕಾಲ ಇರುತ್ತದೆ ಎಂದು ಹೇಳಿದರು.
ನಂತರ ಆರೋಗ್ಯ ಸಚಿವ ಡಾ. ಸುಧಾಕರ್ ಮಾತನಾಡಿ, ಯಡಿಯೂರಪ್ಪನವರು ಹೈಕಮಾಂಡ್ ಮಾರ್ಗದರ್ಶನದಲ್ಲಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಪಕ್ಷದ ಲಕ್ಷಾಂತರ ಕಾರ್ಯಕರ್ತರು ಸೇರಿ ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಅವರ ರಾಜೀನಾಮೆ ಬಗ್ಗೆ ನನಗೆ ವೈಯಕ್ತಿಕವಾಗಿ ಆಶ್ಚರ್ಯ ಮತ್ತು ಬೇಸರ ತಂದಿದೆ ಎಂದರು.
ಸಿಎಂ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕರು ಸಿಎಂ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ:
ಸಿಎಂ ರಾಜೀನಾಮೆ ಸಂಬಂಧ ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕ, ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಪ್ರತಿಕ್ರಿಯೆ ನೀಡಿದರು.
ಯಡಿಯೂರಪ್ಪನವರು ರಾಜೀನಾಮೆ ನೀಡಿರುವ ಬಗ್ಗೆ ಮಾಧ್ಯಮದ ಮೂಲಕ ತಿಳಿದು ಬಂದಿದ್ದೆ. ಬಿಎಸ್ವೈರವರು ತಮ್ಮ ಎರಡು ವರ್ಷದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ರಾಜ್ಯಾದ್ಯಂತ ಸುತ್ತಾಡಿ ಅನೇಕ ಸಂದಿಗ್ಧ ಪರಿಸ್ಥಿತಿಯಲ್ಲೂ ಉತ್ತಮ ಆಡಳಿತ ನಡೆಸಿದ್ದಾರೆ. ಎರಡು ವರ್ಷದ ಅವರ ಸೇವೆ ಶ್ಲಾಘನೀಯವಾಗಿದೆ ಎಂದರು.
ಶ್ರೀಕಂಠಯ್ಯ ಬೇಸರ:
ಇನ್ನು ಸಿಎಂ ಪದತ್ಯಾಗದ ಕುರಿತಂತೆ ಮಂಡ್ಯದಲ್ಲಿ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರತಿಕ್ರಿಯೆ ನೀಡಿದ್ದು, ಕೋವಿಡ್ ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸರಿಯಲ್ಲ. ರಾಜಕೀಯ ಬದಲಾವಣೆಯ ವಿದ್ಯಮಾನಗಳು ನಮಗೆ ಸಂಕೋಚ ತಂದಿದೆ ಎಂದರು.
ರಾಜಕೀಯ ಜೀವನದಲ್ಲಿ ಇರುವುದು ಜನರಿಗೆ ಸೇವೆ ಮಾಡೋಕೆ. ಇಂತಹ ಸಂದರ್ಭಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬೇಕಿತ್ತ, ಸ್ವಲ್ಪ ದಿನಗಳ ನಂತರ ಬದಲಾವಣೆ ಮಾಡಿದ್ರೆ ನಡೆಯುತ್ತಿತ್ತು. ರಾಜ್ಯ ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಎಲ್ಲಾ ಮಂತ್ರಿಗಳ ಕೇಂದ್ರಿಕೃತವಾಗಿರೋದು ಮುಖ್ಯಮಂತ್ರಿ ಸ್ಥಾನದ ಮೇಲೆ. ಆದರೆ ಇಂತಹ ಸಂದರ್ಭದಲ್ಲಿ ಇತರ ನಡೆಯುತ್ತಿರುವುದು ನಮಗೆಲ್ಲ ಬೇಜಾರಾಗಿದೆ ಎಂದರು.
ಬಿಎಸ್ವೈ ನಾ ಕಂಡ ಉತ್ತಮ ಸಿಎಂ:
ಸಿಎಂ ಬಿಎಸ್ವೈ ರಾಜೀನಾಮೆ ಕುರಿತಂತೆ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪನವರನ್ನು ನಾನು ಹತ್ತಿರದಿಂದ ನೋಡಿದಂತೆ ಅವರೊಬ್ಬರು ಉತ್ತಮ ಮುಖ್ಯಮಂತ್ರಿಯಾಗಿದ್ದರು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಹೈಕಮಾಂಡ್ ಬಹಳ ಬಲಿಷ್ಠವಾಗಿದೆ. ಯಾರ ಮಾತಿಗೂ ಸೊಪ್ಪು ಹಾಕದೆ ಅವರ ಅಜಂಡಾದಂತೆ ನಡೆದುಕೊಂಡಿದ್ದಾರೆ. ಬಿಜೆಪಿ ಹೈಕಮಾಂಡ್ ಆದಷ್ಟು ಬೇಗ ರಾಜ್ಯಕ್ಕೆ ಒಬ್ಬ ಒಳ್ಳೆ ಸಿಎಂ ಕೊಡಬೇಕು ಎಂದರು.
ಸಿಎಂ ರಾಜೀನಾಮೆ ಬಗ್ಗೆ ತಿಪ್ಪಾರೆಡ್ಡಿ ಪ್ರತಿಕ್ರಿಯೆ ನಮ್ಮ ಬಲ ಕುಸಿದ ಭಾವನೆ :
ಬಿಎಸ್ ಯಡಿಯೂರಪ್ಪ ಬಿಜೆಪಿಯ ಆಧಾರ ಸ್ತಂಭದಂತೆ ಇದ್ದರು. ಇದೀಗ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನಮ್ಮ ಬಲ ಕುಸಿದ ಭಾವನೆ ಕಾಣತೊಡಗುತ್ತಿದೆ ಎಂದು ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಸರೇಳುವವರು ಇಲ್ಲದಿದ್ದಾಗ ಪಕ್ಷ ಕಟ್ಟಿ ಯಡಿಯೂರಪ್ಪನವರು ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತಂದರು. ನಮ್ಮಂಥವರನ್ನು ಗೆಲ್ಲಿಸಲು ರಾಜ್ಯಾದ್ಯಂತ ಬಿಎಸ್ವೈ ಯುವಕರಂತೆ ಸುಂಟರಗಾಳಿಯಂತೆ ತಿರುಗಿ ಪಕ್ಷ ಕಟ್ಟಿದವರು.ಇಂದು ಬಿಎಸ್ವೈ ರಾಜೀನಾಮೆಯಿಂದ ವಿರೋಧಿಗಳಲ್ಲೂ ದುರಾದೃಷ್ಠ ಎಂಬ ಭಾವನೆ ಉಂಟಾಗಿರುತ್ತದೆ ಎಂದರು.
ಓದಿ: ರಾಜ್ಯಪಾಲರಿಂದ ಬಿಎಸ್ವೈ ರಾಜೀನಾಮೆ ಅಂಗೀಕಾರ, ಸಚಿವ ಸಂಪುಟ ವಿಸರ್ಜನೆ
ಸರ್ಕಾರವೇ ವಿಸರ್ಜನೆಯಾಗಬೇಕಿತ್ತು:
ಭ್ರಷ್ಟಾಚಾರದಿಂದ ಆಡಳಿತ ನಡೆದಿತ್ತು. ಸಿಎಂ ಬದಲಾವಣೆ ಮಾತ್ರವಲ್ಲ ಸಂಪೂರ್ಣ ಸರ್ಕಾರವೇ ವಿಸರ್ಜನೆಯಾಗಬೇಕಿತ್ತು ಎಂದು ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತ್ತೆ ಚುನಾವಣೆ ಆಗಬೇಕು. ಮತ್ತೆ ಅಂತಹುದೇ ಭ್ರಷ್ಟ ಸಿಎಂ ಬರೋದಿಂದ್ರ ಜನರಿಗೆ ಲಾಭ ಇಲ್ಲ ಜನರು ಇವರ ಆಡಳಿತಕ್ಕೆ ಬೇಸತ್ತು ಹೋಗಿದ್ದಾರೆ. ಸಿದ್ದರಾಮಯ್ಯ ಆಡಳಿತಕ್ಕೂ ಈಗಿನ ಆಡಳಿತಕ್ಕೂ ಹೋಲಿಕೆ ಮಾಡಿ ಜನ ನೋಡುತ್ತಿದ್ದಾರೆ. ಮತ್ತೇ ಸಿದ್ದರಾಮಯ್ಯ ಸರ್ಕಾರ ಬರಬೇಕು ಅಂತಾ ಜನ ಬಯಸಿದ್ದಾರೆ ಎಂದರು.