ಕರ್ನಾಟಕ

karnataka

ETV Bharat / state

ಸ್ಮಾರಕಗಳ ದತ್ತು ಯೋಜನೆ: ಅನಿವಾಸಿ ಭಾರತೀಯರೊಂದಿಗೆ ಅಂತರರಾಷ್ಟ್ರೀಯ ಮಟ್ಟದ ಸಭೆ - ministerial meeting with nris

ಸ್ಮಾರಕಗಳ ದತ್ತು ಯೋಜನೆ ಯಶಸ್ವಿಗಾಗಿ ಅನಿವಾಸಿ ಭಾರತೀಯರೊಂದಿಗೆ ಸಚಿವ ಎಚ್.ಕೆ.ಪಾಟೀಲ್​ ಸಭೆ ನಡೆಸಿದರು.

ಅನಿವಾಸಿ ಭಾರತೀಯರೊಂದಿಗೆ ಸಚಿವರ ಸಭೆ
ಅನಿವಾಸಿ ಭಾರತೀಯರೊಂದಿಗೆ ಸಚಿವರ ಸಭೆ

By ETV Bharat Karnataka Team

Published : Oct 13, 2023, 10:39 PM IST

ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯ ಮಹತ್ವಾಕಾಂಕ್ಷಿ 'ಸ್ಮಾರಕ ದತ್ತು' ಯೋಜನೆಯ ಯಶಸ್ಸಿಗಾಗಿ ಸಚಿವ ಎಚ್.ಕೆ.ಪಾಟೀಲ್‌ ಅವರು ಜಾಗತಿಕ ಸಮೂಹವನ್ನು ಸೆಳೆಯುವ ಸಲುವಾಗಿ ಇಂದು ಅಂತರರಾಷ್ಟ್ರೀಯ ಮಟ್ಟದ ಸಭೆ ನಡೆಸಿದರು. ಸೆಪ್ಟೆಂಬರ್‌ 25 ರಂದು 'ಸ್ಮಾರಕಗಳ ದತ್ತು' ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈ ಯೋಜನೆಯ ಯಶಸ್ಸಿಗೆ ಅನುವಾಗುವಂತೆ ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್‌ ಅವರು ಅನಿವಾಸಿ ಭಾರತೀಯ ಕನ್ನಡಿಗರೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಸಿದರು.

ಬಹು ವರ್ಷಗಳ ಹಿಂದೆ ಕರುನಾಡನ್ನು ತೊರೆದು ಇದೀಗ ಅಮೇರಿಕ ವಿವಿಧ ಬೃಹತ್‌ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಸಂಸ್ಥೆಗಳ ಮಾಲೀಕರಾಗಿ ದೇಶದ ಹಿರಿಮೆ ಸಾರಿರುವ ಅನಿವಾಸಿ ಭಾರತೀಯ ಕನ್ನಡಿಗರೊಂದಿಗೆ ಜೂಮ್‌ (ವರ್ಚ್ಯೂವಲ್​ ಮೀಟಿಂಗ್​ ​​ಆ್ಯಪ್​) ಮೂಲಕ ಅಂತರರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್‌, ರಾಜ್ಯದ 'ಸ್ಮಾರಕ ದತ್ತು' ಯೋಜನೆ ಉದ್ದೇಶವನ್ನು ವಿವರಿಸಿದರಲ್ಲದೆ, ಈ ಯೋಜನೆ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.

ರಾಜ್ಯದ ಪ್ರವಾಸಿ ಕೇಂದ್ರಗಳನ್ನು ಇನ್ನಷ್ಟು ಆಕರ್ಷಕಗೊಳಿಸಲು ಮತ್ತು ಪ್ರವಾಸಿಗರಿಗೆ ಆಹ್ಲಾದಕರ ಅನುಭವ ಸಿಗುವಂತೆ ಮಾಡಲು ಮೂಲಸೌಕರ್ಯಗಳನ್ನು ಒದಗಿಸುವತ್ತ ರಾಜ್ಯ ಸರ್ಕಾರ ಚಿತ್ತಹರಿಸಿದೆ ಎಂದು ತಿಳಿಸಿದ ಸಚಿವರು, ರಾಜ್ಯದ ಬಗ್ಗೆ ಪ್ರೀತಿ ಅಭಿಮಾನ ಉಳ್ಳಂತಹವರು ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಇತ್ತೀಚೆಗೆ ರಾಜ್ಯದ ಇನ್ನೂ ಮೂರು ಪ್ರವಾಸಿ ತಾಣಗಳನ್ನು ಯೂನೆಸ್ಕೋ ವಿಶ್ವ ಪಾರಂಪರಿಕ ತಾಣ ಎಂದು ಗುರ್ತಿಸಿ ಪ್ರಕಟಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು, ಬೇಲೂರು, ಹಳೆ ಬೀಡು ಮತ್ತು ಸೋಮನಾಥ ಪುರ ದೇಗುಲಕ್ಕೆ ಜಾಗತಿಕ ಪ್ರವಾಸಿಗರ ಹರಿವು ಹೆಚ್ಚಲಿದೆ.

ಈ ಹಿನ್ನೆಲೆಯಲ್ಲಿ ʼಸ್ಮಾರಕ ದತ್ತುʼ ಯೋಜನೆಗೆ ಯಶಸ್ಸು ದೊರಕಲಿದೆ ಎಂದು ಅನಿವಾಸಿ ಭಾರತೀಯರಿಗೆ ಅದರಲ್ಲೂ ಅಮೇರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಭರವಸೆ ನೀಡಿದರು. ಸಭೆಯಲ್ಲಿ ವಿದೇಶಗಳಿಂದ ಪಾಲ್ಗೊಂಡಿದ್ದ ಉದ್ಯಮಿಗಳು ರಾಜ್ಯದ ಸ್ಮಾರಕ ದತ್ತು ಯೋಜನೆ ಬಗ್ಗೆ ಹರ್ಷ ವ್ಯಕ್ತಪಡಿಸಿದರಲ್ಲದೆ, ತಮ್ಮ ಸಹಕಾರದ ಜತೆಗೆ ತಾವು ಪ್ರತಿನಿಧಿಸುತ್ತಿರುವ ಇತರೆ ಖಾಸಗಿ ಸಂಸ್ಥೆಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮುಂಚೂಣಿ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುವ ಮೂಲಕ ಯೋಜನೆ ಯಶಸ್ಸಿಗೆ ಸಾಥ್‌ ನೀಡುವುದಾಗಿ ಪ್ರಕಟಿಸಿದರು.

ಇತಿಹಾಸ ತಿಳಿದರೆ ಇತಿಹಾಸ ಸೃಷ್ಟಿಸಬಹುದು, ಇತಿಹಾಸವನ್ನು ಹೇಳುವ ನಮ್ಮ ಸ್ಮಾರಕಗಳು ಅದ್ಭುತ ಮೌಲ್ಯಗಳಿರುವಂತಹವು. ನಮ್ಮ ಪರಂಪರೆ ಸಾರುವ ಈ ನಮ್ಮ ಸ್ಮಾರಕಗಳು ನಮ್ಮತನದ ಜತೆಗೆ ನಮ್ಮೆಲ್ಲರ ಅಭಿಮಾನ- ಗರ್ವದ ಪ್ರತೀಕ. ಈ ಸ್ಮಾರಕಗಳನ್ನು ದತ್ತು ಪಡೆಯಲು ನಮ್ಮವರಾದವರು ಮುಂದೆ ಬರಬೇಕು ಎಂದು ಹೇಳಿದರು.

ಸಭೆಯಲ್ಲಿ ಅಕ್ಸೆಲ್ ವೆಂಚರ್ ಸಂಸ್ಥೆಯ ಪಾಲುದಾರ ಮತ್ತು ಕಲ್ಕಿ ಫೌಂಡೇಶನ್‌ ಅಧ್ಯಕ್ಷರಾಗಿರುವ ಪ್ರಶಾಂತ್‌ ಪ್ರಕಾಶ್, ಅಮೇರಿಕದ ವಿವಿಧ ರಾಯಭಾರಿಗಳು ಮತ್ತು ರಾಜ್ಯದ ಪರವಾಗಿ ಪ್ರವಾಸೋದ್ಯಮ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌, ಪುರಾತತ್ವ ಇಲಾಖೆ ಆಯುಕ್ತರಾದ ದೇವರಾಜ್‌ ಸೇರಿದಂತೆ ಅಧಿಕಾರಿಗಳ ತಂಡ ಹಾಜರಿತ್ತು.

ಇದನ್ನೂ ಓದಿ:ರೈತರಿಗೆ ನಿತ್ಯ 5 ತಾಸು ವಿದ್ಯುತ್ ಪೂರೈಕೆ ಮಾಡಿ, ಲೋಡ್ ಶೆಡ್ಡಿಂಗ್ ಆಗದಂತೆ ಎಚ್ಚರಿಕೆ ವಹಿಸಿ: ಸಿಎಂ ಸೂಚನೆ

ABOUT THE AUTHOR

...view details