ಬೆಂಗಳೂರು :ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ನಿರ್ಮಾಣ ಆರಂಭ ಸೇರಿದಂತೆ ನೆನಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಕುರಿತು ಶೀಘ್ರದಲ್ಲಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ ಸೋಮಣ್ಣ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಿ ಕೆ ಹರಿಪ್ರಸಾದ್ ಪ್ರಶ್ನೆಗೆ ಅವರು ಉತ್ತರಿಸಿದರು. ತಾಳಗುಪ್ಪ-ಹೊನ್ನಾವರ 82 ಕಿ.ಮೀ ದೂರ ಯೋಜನೆ ಆಗಿದೆ. ಇಂತಹ ಯೋಜನೆಗೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ.
ತಾಳಗುಪ್ಪ- ಹೊನ್ನಾವರ ಪಶ್ಚಿಮಘಟ್ಟ ಇರುವುದರಿಂದ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ರೈಲ್ವೆ ಯೋಜನೆಗಳಿಗೆ ಶೇ.50ರ ಕಾಸ್ಟ್ ಶೇರಿಂಗ್ ಮಾಡುತ್ತಿದ್ದೇವೆ. ಇದರ ಜೊತೆ ಭೂಸ್ವಾಧೀನ ದೊಡ್ಡ ಹೊರೆಯಾಗಿದೆ ಎಂದರು.
10 ಸಾವಿರ ಕೋಟಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕೊಡಬೇಕಿದೆ. ಆದರೂ ನಾವು ಯೋಜನೆಗಳನ್ನು ಕಡೆಗಣಿಸುವುದಿಲ್ಲ. ಇನ್ನು, 15-20 ದಿನದಲ್ಲಿ ಸಭೆ ನಡೆಸಲಿದ್ದೇವೆ. ತಾಳಗುಪ್ಪ ಹೊನ್ನಾವರದ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಎಲ್ಲ ಕುಳಿತು ಚರ್ಚಿಸಿ ಸಿಎಂ ಗಮನಕ್ಕೆ ತರಲಾಗುತ್ತದೆ. ಈಗಾಗಲೇ ನೆನಗುದಿಗೆ ಬಿದ್ದಿರುವ ಯೋಜನೆಗಳಿಗೆ ಆದ್ಯತೆ ನೀಡಲಿದ್ದೇವೆ.
ಬಾಕಿ ಇರುವ 9 ಯೋಜನೆ ಜೊತೆಗೆ ತಾಳಗುಪ್ಪ ಹೊನ್ನಾವರ ಯೋಜನೆ ಕೈಗೆತ್ತಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಿಎಂ ಜೊತೆ ಮಾತುಕತೆ ನಡೆಸಲಾಗುತ್ತದೆ. ನಾವು ಆದ್ಯತೆ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದೇವೆ ಎಂದರು.
ಅಕ್ರಮ ಸಕ್ರಮಕ್ಕೆ ಸುಪ್ರೀಂ ತಡೆ ತೆರವಿಗೆ ಕ್ರಮ:ಅಕ್ರಮ ಸಕ್ರಮ ಯೋಜನೆಗೆ ಸುಪ್ರೀಂಕೋರ್ಟ್ ನೀಡಿರುವ ತಡೆಯಾಜ್ಞೆ ತೆರವು ಕುರಿತು ಸರ್ಕಾರ ಎಲ್ಲ ರೀತಿಯ ಕ್ರಮಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಇ ಖಾತೆ ನೀಡದ ವಿಚಾರ ಕುರಿತು ಜೆಡಿಎಸ್ ಪರಿಷತ್ ಸದಸ್ಯ ಕಾಂತರಾಜ್ ಪ್ರಶ್ನೆಗೆ ಅವರು ಉತ್ತರಿಸಿದರು.
ಅಕ್ರಮವಾಗಿ ಕೃಷಿ ಜಮೀನಿನಲ್ಲಿ ನಿವೇಶನ ಮಾಡಿ ಮಾರಾಟ ಮಾಡಿರುವವರು ಸರ್ಕಾರದ ಅನುಮತಿ ನಿಲ್ಲದೆ ಬಡಾವಣೆ ಮಾಡಿದ್ದವರಿಗೆ ಅಕ್ರಮ ಸಕ್ರಮ ಕಾಯ್ದೆ ಜಾರಿ ಮಾಡಿದ್ದೆವು. ಆದರೆ, ಅಕ್ರಮ ಸಕ್ರಮ ಯೋಜನೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.