ಬೆಂಗಳೂರು:ಉಪ ಚುನಾವಣೆಯಲ್ಲಿ ನಮಗೆ ಎರಡೂ ಕ್ಷೇತ್ರ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಒಂದು ಕ್ಷೇತ್ರದಲ್ಲಿ ಸೋತಿದ್ದೇವೆ. ಹಾನಗಲ್ ಸೋಲನ್ನು ಸವಾಲಾಗಿ ಸ್ವೀಕರಿಸಲಿದ್ದೇವೆ, ನಮ್ಮ ಸರ್ಕಾರ ಭದ್ರವಾಗಿದ್ದು, ಬೊಮ್ಮಾಯಿ ನೇತೃತ್ವದಲ್ಲಿ ನಾವು ಚುನಾವಣೆಗೆ ಹೋಗುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸೋಲು-ಗೆಲುವಿಗೆ ಒಬ್ಬರು ಕಾರಣರಾಗುವುದಿಲ್ಲ. ಈ ಬಾರಿ ಜನ ಪ್ರಚಲಿತ ವಿಚಾರಗಳನ್ನು ಗಮನಿಸಿ ಜನರು ಮತ ನೀಡಿಲ್ಲ. ಸಿಂದಗಿಯಲ್ಲಿ ಅಭಿವೃದ್ಧಿಗೆ ಮತ ಕೇಳಿದ್ದೆವು, ನಾವು ಟೀಮ್ ವರ್ಕ್ ಆಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ, ಅಲ್ಲಿ ಗೆಲುವು ಸಿಕ್ಕಿದೆ. ಹಾನಗಲ್ನಲ್ಲೂ ಅದೇ ರೀತಿಯ ಕೆಲಸ ಮಾಡಲಾಗಿತ್ತು ಆದರೂ ಸೋಲಾಗಿದೆ ಇದಕ್ಕೆ ಸಿಎಂ ಒಬ್ಬರೇ ಕಾರಣರಾಗಲ್ಲ ಎಂದರು.
ಇದನ್ನೂ ಓದಿ:ಹಾನಗಲ್ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಜಯಭೇರಿ
ಹಾನಗಲ್ನಲ್ಲಿ ನಮಗೆ ಸೋಲಾಗಿದೆ. ಉದಾಸಿಯವರಿಗೆ ಅನಾರೋಗ್ಯವಾಗಿತ್ತು. ಹಾಗಾಗಿ ಕ್ಷೇತ್ರ ಕಡೆ ಸ್ವಲ್ಪ ಗಮನ ಕೊಡಲಿಕ್ಕಾಗಿರಲಿಲ್ಲ. ಶ್ರೀನಿವಾಸ್ ಮಾನೆ ತಮ್ಮ ವೈಯಕ್ತಿಕ ವರ್ಚಸ್ಸಿಂದ ಗೆದ್ದಿದ್ದಾರೆ. ಅದು ಕಾಂಗ್ರೆಸ್ ಗೆಲುವಲ್ಲ, ಮಾನೆ ಗೆಲುವು, ಹಾನಗಲ್ ಸೋಲನ್ನು ಸವಾಲಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ಸಿಂದಗಿ ಬೈಎಲೆಕ್ಷನ್ ಫಲಿತಾಂಶ.. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31,185 ಮತಗಳ ಅಂತರದಿಂದ ಭರ್ಜರಿ ಗೆಲುವು
ಸಿಂದಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಿಎಂ ನಿರ್ಧಾರ ಮಾಡಿದ್ದಾರೆ. ಜನಕ್ಕೆ ಅಭಿವೃದ್ಧಿ ಬೇಕು, ಅಭಿವೃದ್ಧಿ ಮನಸಲ್ಲಿಟ್ಕೊಂಡು ಸಿಂದಗಿ ಜನ ಅಭೂತಪೂರ್ವ ತೀರ್ಪು ಕೊಟ್ಟಿದ್ದಾರೆ. ನವೆಂಬರ್ 8 ರಂದು ನಾವು ಸಿಂದಗಿಗೆ ಹೋಗುತ್ತೇವೆ. ಅಲ್ಲಿನ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಹಾನಗಲ್ನಲ್ಲಿ ನಮಗೆ ಕಳೆದ ಸಲ ಬಂದಿದ್ದ ಮತಗಳು ಬಂದಿವೆ. ಸಜ್ಜನರ್ 79,513 ಮತ ತಗೊಂಡಿದ್ದಾರೆ ಮಾನೆ 87+ ಸಾವಿರ ಮತ ತಗೊಂಡಿದ್ದಾರೆ. ನಮ್ಮ ಮತ ಎಲ್ಲೂ ಹೋಗಿಲ್ಲ, ನಮ್ಮ ಮತ ನಮಗೇ ಬಂದಿದೆ. ಉದಾಸಿಯವರ ಆರೋಗ್ಯ ಕ್ಷೀಣಿಸಿದ್ದರಿಂದ ಕೋವಿಡ್ ವೇಳೆ ಓಡಾಡಲು ಆಗಿರಲಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆ ಮಾಡಿದ್ದೆವು. ಯಡಿಯೂರಪ್ಪ ಸಹ ಮೂರು ದಿನ ಅಲ್ಲೇ ಇದ್ದರು. ಸೋಲು-ಗೆಲುವು ಯಾರದ್ದು ಅಂತಲ್ಲ ಮಾನೆ ಕೋವಿಡ್ ಸಮಯದಲ್ಲಿ ಜನರಿಗೆ ಉಪಕಾರ ಮಾಡಿದ್ದರು, ಜನ ಉಪಕಾರ ಸ್ಮರಿಸಿ ಮಾನೆ ಗೆಲ್ಲಿಸಿದ್ದಾರೆ ಎಂದರು.