ಮೈಸೂರು: ದಸರಾ ಉದ್ಘಾಟನಾ ಕಾರ್ಯಕ್ರಮಗಳಿಗೆ ಕೆಲ ಸಚಿವರು ಗೈರಾದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿ, ಎಲ್ಲರಿಗೂ ಬರಲು ಹೇಳಿದ್ದೇನೆ. ಯಾರು ಬರುತ್ತಾರೊ ಅವರಿಗೆ ತಾಯಿ ಚಾಮುಂಡಿ ಒಳ್ಳೆದನ್ನು ಮಾಡುತ್ತಾಳೆ, ಬರದವರಿಗೂ ಆಶೀರ್ವಾದ ಮಾಡ್ಲಿ ಎಂದು ಬೇಡಿಕೊಳ್ಳುವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಇಲ್ಲಿಯವರೆಗೆ ಎಂಟು ಜನ ಸಚಿವರು ಬಂದಿದ್ದಾರೆ. ಇನ್ನೂ ಬರುತ್ತಾರೆ. ಚಾಮುಂಡೇಶ್ವರಿ ಆಶೀರ್ವಾದ ಯಾರಿಗೆ ಬೇಕೋ ಅವರು ಬರುತ್ತಾರೆ. ಈ ಬಗ್ಗೆ ಹೆಚ್ಚಾಗಿ ಮಾಧ್ಯಮದವರು ತಲೆಕೆಡಿಸಿಕೊಳ್ಳಬೇಡಿ ಅಂತ ಸಚಿವ ಸೋಮಣ್ಣ ಹೇಳಿದ್ರು.
ಈ ಬಾರಿ ಯುವ ದಸರಾ ಪಾಸ್ ಗೊಂದಲವನ್ನು ನಿವಾರಿಸಲು ಪಾಸ್ ವ್ಯವಸ್ಥೆ ಬೇಡವೆಂದು ತೀರ್ಮಾನಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಅವಕಾಶ ಕೊಡಲಾಗುತ್ತದೆ. ಇನ್ನು ವಿಐಪಿಗಳು ಬಂದರೆ ಅವರಿಗೆ ಪ್ರತ್ಯೇಕ ಕೌಂಟರ್ ವ್ಯಸಸ್ಥೆ ಮಾಡಲಾಗುತ್ತದೆ. ಈ ಕುರಿತು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ರು.
ಇನ್ನು ಜಂಬೂಸವಾರಿಯ ದಿನ ಅರಮನೆಯಲ್ಲಿ 26 ಸಾವಿರ ಆಸನ ವ್ಯವಸ್ಥೆ, ಬನ್ನಿಮಂಟಪದಲ್ಲಿ 32 ಸಾವಿರ ಆಸನ ವ್ಯವಸ್ಥೆ ಮಾಡಿದ್ದು, ಜಂಬೂಸವಾರಿ ಅರಮನೆಯಿಂದ ಬನ್ನಿಮಂಟಪದ ವರೆಗೆ ಸುಮಾರು 4 ಕಿಲೋಮೀಟರ್ ಸಾಗುತ್ತದೆ. ಈ ಸಂದರ್ಭದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿ ಹೆಚ್ಚಿನ ಜನ ಕುಳಿತುಕೊಳ್ಳಲು ವ್ಯವಸ್ಥೆ ಮಾಡುತ್ತೇವೆ. ಈ ಬಾರಿ ಜಂಬೂಸವಾರಿ ಹಾಗೂ ದಸರಾವನ್ನು 32 ದಿನಗಳಲ್ಲಿ ಮಾಡಿದ್ದೇವೆ. ಮುಂದಿನ ವರ್ಷ ಚಾಮುಂಡಿ ತಾಯಿಯ ಕೃಪೆಯಿದ್ದರೆ ಇನ್ನೂ ಚೆನ್ನಾಗಿ ಮಾಡುತ್ತೇನೆ. ಈ ಬಾರಿ ದಸರಾವನ್ನು ಜನಸಾಮಾನ್ಯರು ನೋಡುವಂತೆ ಮಾಡುವುದು ನಮ್ಮ ಗುರಿ ಎಂದು ಅವರು ತಿಳಿಸಿದ್ರು.