ಬೆಂಗಳೂರು: ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಒಪ್ಪಿದರೆ, ರಾಜ್ಯದಲ್ಲಿ ಜಾರಿಯಲ್ಲಿರುವ ಅನ್ನಭಾಗ್ಯ, ಉಚಿತ ವಿದ್ಯುತ್ ನಂತಹ ಯೋಜನೆಗಳು ಬಂದ್ ಆಗಲಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ರದ್ದು ಮಾಡುವ ಉದ್ದೇಶ ರಾಜ್ಯಕ್ಕಿಲ್ಲ: ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅನ್ನಭಾಗ್ಯ, ಉಚಿತ ವಿದ್ಯುತ್ ನೀಡುವ ಯೋಜನೆಗಳನ್ನು ರದ್ದು ಮಾಡುವ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ. ಆದರೆ ಉಚಿತ ಕೊಡುಗೆಗಳನ್ನು ರದ್ದು ಮಾಡುವಂತೆ ಸರ್ವೋಚ್ಚ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದರೆ, ನಾವು ಅನಿವಾರ್ಯವಾಗಿ ಅದನ್ನು ಒಪ್ಪಬೇಕಾಗುತ್ತದೆ ಎಂದರು.
ಸದ್ಯಕ್ಕೆ ರಾಜ್ಯದ ಜನರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಐದು ಕೆಜಿ ಅಕ್ಕಿ, ರಾಜ್ಯ ಸರ್ಕಾರದ ವತಿಯಿಂದ ಐದು ಕೆಜಿ ಅಕ್ಕಿ, ಪ್ರದೇಶಕ್ಕನುಗುಣವಾಗಿ ಎರಡು ಕೆಜಿ ರಾಗಿ, ಇಲ್ಲವೇ ಜೋಳ ಮತ್ತು ಒಂದು ಕೆಜಿ ತೊಗರಿ ಬೇಳೆ ನೀಡಲಾಗುತ್ತಿದೆ. ಈ ಪೈಕಿ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ ಯೋಜನೆಯಡಿ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನು ಸೆಪ್ಟಂಬರ್ ಅಂತ್ಯದವರೆಗೆ ನೀಡುವುದಾಗಿ ಹೇಳಿದೆ.
ಇದನ್ನೂ ಓದಿ: ಸಾಮಾಜಿಕ ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಉಚಿತ ಕೊಡುಗೆ ಎನ್ನಲಾಗದು: ಡಿಎಂಕೆ ಪ್ರತಿಪಾದನೆ
ಒಂದು ವೇಳೆ ಕೇಂದ್ರ ಸರ್ಕಾರ ತನ್ನ ತೀರ್ಮಾನಕ್ಕೆ ಬದ್ಧವಾದರೆ ರಾಜ್ಯದ ಜನರಿಗೆ ನಾವು ಕೊಡುತ್ತಿರುವ ಐದು ಕೆಜಿ ಅಕ್ಕಿ, ಎರಡು ಕೆಜಿ ರಾಗಿ, ಇಲ್ಲವೇ ಜೋಳ ಮತ್ತು ಒಂದು ಕೆಜಿ ತೊಗರಿ ಬೇಳೆ ಮಾತ್ರ ಸಿಗುತ್ತದೆ. ರಾಜ್ಯ ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ಕೇಂದ್ರ ಸರ್ಕಾರ ಕೆಜಿಗೆ ಮೂರು ರೂಪಾಯಿ ದರದಲ್ಲಿ ನಮಗೆ ಪೂರೈಸುತ್ತಿದ್ದು, ನಾವು ಅದನ್ನು ಉಚಿತವಾಗಿ ಜನರಿಗೆ ಕೊಡುತ್ತಿದ್ದೇವೆ ಎಂದರು.
ಇದೇ ರೀತಿ ಕೇಂದ್ರ ಸರ್ಕಾರ ಕೊಡುವ ಅಕ್ಕಿ ಅನ್ನಭಾಗ್ಯ ಯೋಜನೆಗೆ ಕಡಿಮೆಯಾಗುವುದರಿಂದ ಹೆಚ್ಚುವರಿ ಅಕ್ಕಿಯನ್ನು ಕೆಜಿಗೆ 28 ರೂ.ಗಳಂತೆ ಖರೀದಿಸಿ ಜನರಿಗೆ ವಿತರಿಸುತ್ತಿದ್ದೇವೆ. ಕೊರತೆಯಾಗುವ ಅಕ್ಕಿಯ ಬಾಬ್ತಿನಲ್ಲಿ ನಾವು 600 ಕೋಟಿ ರೂ. ಗಳನ್ನು ಭರಿಸುತ್ತಿದ್ದು, ಕೇಂದ್ರ ಕೊಡುತ್ತಿರುವ ಅಕ್ಕಿಯ ಬಾಬ್ತಿನಲ್ಲಿ 1,900 ಕೋಟಿ ರೂ.ಗಳಷ್ಟು ಹಣವನ್ನು ಕೊಡುತ್ತಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ಕುಚಲಕ್ಕಿ ನಮಗೆ ಲಭ್ಯವಾಗುತ್ತಿಲ್ಲ: ಜನರಿಗೆ ಕುಚಲಕ್ಕಿಯನ್ನು ಒದಗಿಸುವ ಸಲುವಾಗಿ ಬೆಂಬಲ ಬೆಲೆ ನೀಡಿ ಅದನ್ನು ಖರೀದಿಸಲು ತೀರ್ಮಾನಿಸಿದ್ದೇವಾದರೂ ಕುಚಲಕ್ಕಿ ನಮಗೆ ಲಭ್ಯವಾಗುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು. ಬೆಂಬಲ ಬೆಲೆ ನೀಡಿ ಕುಚಲಕ್ಕಿ ಖರೀದಿ ಮಾಡಲು ನಾವು ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಪ್ರಮಾಣದ ದರವನ್ನು ಕೇರಳದಲ್ಲಿ ನೀಡುತ್ತಿರುವುದರಿಂದ ಕುಚಲಕ್ಕಿ ಅಲ್ಲಿಗೆ ಪೂರೈಕೆಯಾಗುತ್ತಿದೆ. ಹೀಗಾಗಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದು ನುಡಿದರು.