ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯು ಫಲಿತಾಂಶ ಕುಸಿಯಲು ಉಪನ್ಯಾಸಕರ ಕೊರತೆ ಸಹ ಒಂದು ಕಾರಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ಗೆ ಶಿಕ್ಷಣ ಸಚಿವ ಸುರೇಶ್ಕುಮಾರ್ ತಿರುಗೇಟು ನೀಡಿದ್ದಾರೆ.
ಸಿದ್ಧರಾಮಯ್ಯನವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರು, ಪ್ರಾಜ್ಞರು, ಅತಿ ಹೆಚ್ಚು ಸಲ ಬಜೆಟ್ ಮಂಡಿಸಿರುವ ಖ್ಯಾತಿಯುಳ್ಳವರು ಸಹ. ಕೇವಲ ವಿರೋಧ ಮಾಡಲೆಂದೇ ಸಂಶೋಧಿಸಿರುವ ಕಾರಣಕ್ಕೆ ಉತ್ತರ ನೀಡುತ್ತಿದ್ದೇನೆ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ದ್ವಿತೀಯ ಪಿಯು ಫಲಿತಾಂಶಕ್ಕೂ 1,298 ಉಪನ್ಯಾಸಕರ ಕೌನ್ಸೆಲಿಂಗ್ ರದ್ದು ಮಾಡಿರುವುದಕ್ಕೂ ನಂಟು ಮಾಡುತ್ತಿದ್ದಾರೆ. ಉಪನ್ಯಾಸಕರ ಆಯ್ಕೆ ಮತ್ತು ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದ್ದು 2015ರಲ್ಲಿ, ಆಗ ನೀವೇ ಮುಖ್ಯಮಂತ್ರಿಗಳಾಗಿದ್ದದ್ದು. 2015ರಿಂದ 2018ರವರೆಗೂ ನಿಮ್ಮ ಅವಧಿಯಲ್ಲಿ ಏಕೆ ಈ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಸಚಿವನಾದ ಮೇಲೆ ಈ ಉಪನ್ಯಾಸಕರ ಆಯ್ಕೆ ಫಲಿತಾಂಶ ಪ್ರಕಟವಾಗುವಲ್ಲಿ ಕ್ರಮ ಜರುಗಿಸಿದೆ. ನಂತರ ಕೋರ್ಟ್ ತಡೆಯಾಜ್ಞೆ ಮುಂತಾದ ಸಮಸ್ಯೆಗಳು ಬಂದವು. ಈ ತಿಂಗಳ 8ರಿಂದ ಅಂದರೆ ಜುಲೈ 8ರಿಂದ ಕೌನ್ಸೆಲಿಂಗ್ ಪ್ರಾರಂಭವಾಗಬೇಕಿತ್ತು. ಆದರೆ ಆರ್ಥಿಕ ಇಲಾಖೆಯ ಆದೇಶದ ಮೇರೆಗೆ ಕೌನ್ಸೆಲಿಂಗ್ಅನ್ನು ಮುಂದೂಡಲಾಗಿದೆಯಷ್ಟೇ, ಅದನ್ನು ರದ್ದುಗೊಳಿಸಿಲ್ಲ. ಮೇಲಾಗಿ ಪಿಯುಸಿ ಪರೀಕ್ಷೆಗಳು ಮುಗಿದದ್ದು ಜೂನ್ 18ರಂದು, ಕೌನ್ಸೆಲಿಂಗ್ ಮುಂದೂಡಿರುವುದು ಜುಲೈ 8ರಂದು ಎಂದು ಹೇಳಿದ್ದಾರೆ.
ಈ ಅಂಶಗಳನ್ನ ಗಮನಿಸಿದರೆ ಗೊತ್ತಾಗುತ್ತದೆ ಪ್ರತಿಪಕ್ಷದ ನಾಯಕರು ಯಾವುದಾದರೂ ಕಾರಣದಿಂದ ವಿರೋಧ ಮಾಡಲೇಬೇಕೆಂದು ತಪ್ಪನ್ನು ಹುಡುಕುತ್ತಿದ್ದಾರೆ. ಆದರೆ ಆ ತಪ್ಪಿನ ಮೂಲ 2015ರಿಂದ 2018ರವರೆಗೆ ಪರೀಕ್ಷೆ ನಡೆಸದೆ ಫಲಿತಾಂಶ ಪ್ರಕಟಿಸದೆ, ಘನಕಾರ್ಯ ಮಾಡಿರುವ ಸಿದ್ದರಾಮಯ್ಯನವರ ಸರ್ಕಾರದಲ್ಲಿಯೇ ಇದೆ ಎಂದು ಟಾಂಗ್ ನೀಡಿದ್ದಾರೆ.
ಈಗಲೂ 1,298 ಉಪನ್ಯಾಸಕರ ಕೌನ್ಸೆಲಿಂಗ್ ನಡೆಸುವುದಕ್ಕೆ ಬದ್ಧನಾಗಿದ್ದೇನೆ. ಹಾಗೆಯೇ ಸಿದ್ದರಾಮಯ್ಯನವರ ಅವಧಿಯಲ್ಲಿ ಬಂದ ಪಿಯುಸಿ ಫಲಿತಾಂಶಗಳಿಗಿಂತ ಈ ಬಾರಿಯ ಫಲಿತಾಂಶ ಹೆಚ್ಚು ಉತ್ತಮವಾಗಿದೆ ಎಂಬುದನ್ನೂ ಅವರ ಗಮನಕ್ಕೆ ತರುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.