ಬೆಂಗಳೂರು: ಕಸ್ತೂರಿ ರಂಗನ್ ವರದಿಯನ್ವಯ ಯಾವುದೇ ಗ್ರಾಮಸ್ಥರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಶೂನ್ಯ ವೇಳೆಯಲ್ಲಿ ಕಸ್ತೂರಿ ರಂಗನ್ ವರದಿ ಸಂಬಂಧ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಸುರೇಶ್ ಕುಮಾರ್, ಕಸ್ತೂರಿ ರಂಗನ್ ವರದಿಯಂತೆ ನಮ್ಮ ರಾಜ್ಯದಲ್ಲಿ 1,533 ಗ್ರಾಮಗಳು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರಲಿದೆ. ಈ ಸಂಬಂಧ ಕ್ಯಾಬಿನೆಟ್ ಸಬ್ ಕಮಿಟಿ ರಚನೆಯಾಗಿದೆ. ಯಾವುದೇ ಗ್ರಾಮಸ್ಥರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಮೂಲಭೂತ ಸೌಕರ್ಯಕ್ಕೆ ಯಾವುದೇ ಸಮಸ್ಯೆ ಎದುರಾಗಲ್ಲ. ಅವರು ಯಾವುದೇ ಆತಂಕ ಪಡುವುದು ಬೇಡ ಎಂದು ಭರವಸೆ ನೀಡಿದರು.
ಗ್ರಾಮಸ್ಥರ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಅವರ ಹಿತಾಸಕ್ತಿ ಕಾಪಾಡುತ್ತೇವೆ. ಅರಣ್ಯ ಸಚಿವರ ಜೊತೆ ಚರ್ಚೆ ನಡೆಸಿ ಈ ಸಂಬಂಧ ಎನ್‌ಜಿಟಿಗೆ ಹೋಗುವ ಬಗ್ಗೆನೂ ತೀರ್ಮಾನ ಮಾಡುತ್ತೇವೆ ಎಂದರು.
ಇದಕ್ಕೂ ಮುನ್ನ ಕಸ್ತೂರಿ ರಂಗನ್ ವರದಿ ಮೇಲಿನ ಚರ್ಚೆ ವೇಳೆ ಮಾತನಾಡಿದ ಬಿಜೆಪಿ ಶಾಸಕ ಸುನಿಲ್ ಕುಮಾರ್, ಈ ಮೊದಲಿನಿಂದಲೂ ಕಸ್ತೂರಿ ರಂಗನ್ ವರದಿ ಜಾರಿಗೆ ಬರದಂತೆ ನಾವು ಆಗ್ರಹಿಸುತ್ತಿದ್ದೇವೆ. ಯುಪಿಎ ಸರ್ಕಾರ ಈ ವರದಿ ಜಾರಿಗೆ ಯತ್ನಿಸಿತ್ತು. ನಮ್ಮ ವಿರೋಧದ ಮಧ್ಯೆ ಅದು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಒಟ್ಟು 1533 ಗ್ರಾಮಗಳು ಈ ವರದಿಯಂತೆ ಅರಣ್ಯ ವ್ಯಾಪ್ತಿಗೆ ಬರಲಿದೆ. ಅವೈಜ್ಞಾನಿಕವಾಗಿ ಸರ್ವೆ ಮಾಡಿ ಗ್ರಾಮಗಳನ್ನು ಗುರುತಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಓದಿ:ಡಾ.ಕಸ್ತೂರಿ ರಂಗನ್ ವರದಿ: ಉಪಸಮಿತಿಗೆ ಸಚಿವ ಹೆಬ್ಬಾರ್ ಸದಸ್ಯರಾಗಿ ನೇಮಕ
ಪರಿಸರ ಸಂರಕ್ಷಣೆಗೆ ನಮ್ಮ ವಿರೋಧ ಇಲ್ಲ. ಆದರೆ ಅದರ ನೆಪದಲ್ಲಿ ಜನಜೀವನಕ್ಕೆ ಸಮಸ್ಯೆ ಆಗಬಾರದು ಎಂಬುದು ನಮ್ಮ ಒತ್ತಾಯ. ಮೂಲ ಭೂತ ಸೌಕರ್ಯ ನೀಡಲು ಈ ವರದಿ ಜಾರಿಯಿಂದ ಸಮಸ್ಯೆ ಆಗಬಾರದು. ಯಾರನ್ನೂ ಒಕ್ಕಲೆಬ್ಬಿಸಬಾರದು, ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗುವುದಿಲ್ಲ ಎಂಬ ಭರವಸೆಯನ್ನು ಸರ್ಕಾರ ನೀಡಬೇಕು. ಕಸ್ತೂರಿ ರಂಗನ್ ವರದಿಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಅದರಿಂದ ಜನಜೀವನ ಸಮಸ್ಯೆ ಆಗಬಾರದು. ಈ ಸಂಬಂಧ ಮರುಸರ್ವೆ ಮಾಡುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.