ಬೆಂಗಳೂರು:ಖಾಸಗಿ ಶಾಲೆಯೊಂದು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಒಂದನೇ ತರಗತಿಯಿಂದಲೇ ಶಾಲೆ ಆರಂಭಿಸಿತ್ತು. ಕಳೆದ ಜನವರಿ 25ರಂದು ಬೆಳಗ್ಗೆ ಶಾಲೆಗೆ ಸೇರಿದ್ದ ಟಾಟಾ ಸುಮೋದಲ್ಲಿ ಸುಮಾರು 20 ಮಕ್ಕಳನ್ನು ತುಂಬಿಕೊಂಡು ಶಾಲೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಮಕ್ಕಳು ಗಾಯಗೊಂಡಿದ್ರು. ಈ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಮುಳಬಾಗಿಲಿನ ಶಾಲೆಯ ಇಬ್ಬರು ಮಕ್ಕಳು ನಗರದ ಕೊಡಿಗೆಹಳ್ಳಿ ಬಳಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪೋಷಕರನ್ನ ಸಂತೈಸಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸಚಿವ ಸುರೇಶ್ ಕುಮಾರ್, ಕುಶಲ್ ಎಂಬ ಒಂದನೇ ತರಗತಿಯ ಮಗುವಿನ ತಲೆಗೆ ಗಂಭೀರ ಸ್ವರೂಪದ ಗಾಯ ಆಗಿದೆ. ತೇಜಸ್ ಎಂಬ ಏಳನೇ ತರಗತಿಯ ಮಗುವಿನ ಕೈಗಳಿಗೆ ತೀವ್ರ ಸ್ವರೂಪದ ಗಾಯ ಉಂಟಾಗಿದೆ. ಕುಶಾಲ್ ತಂದೆ ಮುಳಬಾಗಿಲಿನ ಸಮೀಪದ ಟೋಲ್ನಲ್ಲಿ ಕೆಲಸ ಮಾಡುವ ನೌಕರರಾಗಿದ್ದಾರೆ. ಆಸ್ಪತ್ರೆಯಲ್ಲಿ ಪೋಷಕರನ್ನು ಹಾಗೂ ವೈದ್ಯರನ್ನು ಮಾತನಾಡಿಸಿ ಮಕ್ಕಳ ಪರಿಸ್ಥಿತಿಯ ಕುರಿತು ಮಾಹಿತಿ ಸಂಗ್ರಹಿಸಿದ್ದೇನೆ. ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ, ಮಕ್ಕಳ ಈ ಪರಿಸ್ಥಿತಿಗೆ ಕಾರಣಕರ್ತವಾದ ಆ ಶಾಲೆಯ ವಿರುದ್ಧ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.