ಬೆಂಗಳೂರು:ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಸಚಿವ ಸುರೇಶ್ ಕುಮಾರ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವ್ಯವಸ್ಥೆ ನೋಡಿದ್ರೆ ನಂಗೂ ಪರೀಕ್ಷೆ ಬರೆಯಬೇಕು ಅನ್ಸುತ್ತೆ: ಸಚಿವ ಸುರೇಶ್ ಕುಮಾರ್ - ಪ್ರಶ್ನೆಪತ್ರಿಕೆ ಲೀಕ್ ಕುರಿತು ಶಿಕ್ಷಣ ಸಚಿವರ ಪ್ರತಿಕ್ರಿಯೆ
SSLC ಪರೀಕ್ಷೆ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ರು. ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ಮಕ್ಕಳಿಗೆ ಆಲ್ ದಿ ಬೆಸ್ಟ್ ಹೇಳಿದ ಅವರು, ಈ ವ್ಯವಸ್ಥಯನ್ನೆಲ್ಲ ನೋಡ್ತಿದ್ರೆ ನಾನೂ ಮತ್ತೆ ಪರೀಕ್ಷೆ ಬರೆಯಬೇಕು ಅನ್ನಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
8.5 ಲಕ್ಷ ವಿದ್ಯಾರ್ಥಿಗಳು ಇವತ್ತು ಪರೀಕ್ಷೆ ಬರೆಯುತ್ತಿದ್ದಾರೆ. ಯಾವುದೇ ಆತಂಕವಿಲ್ಲದೇ ಧೈರ್ಯದಿಂದ ಬನ್ನಿ. ಪರೀಕ್ಷಾ ಕೇಂದ್ರ ಕೂಡ ನಿಮ್ಮ ಮನೆಯಂತೆ ಇರುತ್ತೆ. ಇಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿಶ್ಚಿಂತೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಿರಿ ಎಂದು ಎಲ್ಲ ಮಕ್ಕಳಿಗೂ ಸಚಿವರು ಶುಭ ಕೋರಿದರು.
ಪೋಷಕರು ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಗುಂಪು ಸೇರದೆ ಮಕ್ಕಳನ್ನು ಬಿಟ್ಟು ಮನೆಗೆ ಹೋಗಿ ಅಂತ ತಿಳಿಸಿದರು. ಹಾಲ್ ಟಿಕೆಟ್ ತೋರಿಸಿದ್ರೆ ಸೀಲ್ಡೌನ್ ಏರಿಯಾದಲ್ಲಿರುವ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಡಲಾಗುತ್ತದೆ. ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪೇಪರ್ ಲೀಕ್ ವದಂತಿ ಹಬ್ಬಿಸಿದ ವಿಚಾರವಾಗಿ ಮಾತನಾಡಿದ ಸಚಿವರು, ಆತ ಹೊಸಪೇಟೆಯವನು ಎಂದು ಗೊತ್ತಾಗಿದೆ. ಅವನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.