ಬೆಂಗಳೂರು:ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದು ಪ್ರತಿಷ್ಠೆಯ ಪ್ರಶ್ನೆಯಲ್ಲ ಅಥವಾ ಹಠವೂ ಅಲ್ಲ. ಮಕ್ಕಳ ಭವಿಷ್ಯ, ಹಿತಕ್ಕಾಗಿ ಅತ್ಯಂತ ಹೆಚ್ಚಿನ ಆದ್ಯತೆಯ ಮಕ್ಕಳ ಸುರಕ್ಷತೆ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಗಳ ಧ್ಯೇಯ ವಾಕ್ಯ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ಎಸ್ಎಸ್ಎಲ್ಸಿ ಪರೀಕ್ಷೆಗಳಿಗಾಗಿ ತಮ್ಮ ತಾಲ್ಲೂಕಿನಲ್ಲಿ ಆಗಿರುವ ಸಿದ್ಧತೆಗಳನ್ನು ಪರಿಶೀಲಿಸುತ್ತಿರುವುದನ್ನು ತಿಳಿಸಿ ಸಭೆಗಳನ್ನು ಕೈಗೊಳ್ಳುತ್ತಿದ್ದೇನೆ ಎಂದು ವಿವರಿಸಿದ್ದಾರೆ. ವಿಧಾನಪರಿಷತ್ ಸದಸ್ಯ ಭೋಜೇಗೌಡರು ಅವರ ಕ್ಷೇತ್ರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಆಗಬೇಕಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಎಲ್ಲಾ ಕಡೆ ಪರಿಶೀಲನೆ, ಸಭೆಗಳನ್ನು ನಡೆಸುತ್ತಿರುವುದನ್ನು ತಿಳಿಸಿದ್ದಾರೆ ಎಂದರು.
ಕೊಳ್ಳೇಗಾಲದ ಶಾಸಕ, ಮಾಜಿ ಶಿಕ್ಷಣ ಸಚಿವ ಮಹೇಶ್ ವಿಧಾನಸೌಧದ ದ್ವಾರದಲ್ಲಿ ಸಿಕ್ಕಿ ಅವರ ತಾಲ್ಲೂಕಿನ ಚಿಂತೆ ಬೇಡವೆಂದು ಹೇಳಿ, ತಾನು ಎಲ್ಲಾ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಿಗೆ ಇಂದಿನಿಂದ ಭೇಟಿ ಕೊಟ್ಟು ಪರಿಶೀಲನೆ ನಡೆಸುವ ಕಾರ್ಯ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಸುರಪುರದ ಶಾಸಕ ರಾಜುಗೌಡರು ತಮ್ಮ ಕ್ಷೇತ್ರದ ಪರೀಕ್ಷಾ ವ್ಯವಸ್ಥೆ ಅಚ್ಚುಕಟ್ಟಾಗಿ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ತನ್ನದೆಂದು ಭರವಸೆ ನೀಡಿದ್ದಾರೆ. ದಕ್ಷಿಣ ಜಿಲ್ಲೆಯ ಎಲ್ಲಾ ಶಾಸಕರೂ ತಮ್ಮ ತಮ್ಮ ತಾಲ್ಲೂಕಿನ ಎಸ್ಎಸ್ಎಲ್ಸಿ ಪರೀಕ್ಷೆ ನಿರ್ವಹಣೆ ಕುರಿತು ಮತ್ತು ಮಕ್ಕಳ ಸುರಕ್ಷತೆಯ ಕ್ರಮಗಳ ಕುರಿತು ಸಭೆಗಳನ್ನು ನಡೆಸಿ ವಿಶೇಷ ಆಸಕ್ತಿ ತೋರಿದ್ದಾರೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಕುರಿತು, ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಾದಾಮಿಯಿಂದ ಕರೆ ಮಾಡಿ ಎಸ್ಎಸ್ಎಲ್ಸಿ ಪರೀಕ್ಷೆ ಕುರಿತ ಸಭೆ ನಡೆಸಿದ ವಿಚಾರ ತಿಳಿಸಿ ನನ್ನಿಂದ ಕೆಲವೊಂದು ಸ್ಪಷ್ಟೀಕರಣ ಕೇಳಿದರು. ಇದೀಗ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ವಿಧಾನಪರಿಷತ್ತಿನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯವರೂ ಎಸ್ಎಸ್ಎಲ್ಸಿ ಪರೀಕ್ಷೆಯನ್ನು "ಮಕ್ಕಳ ಸುರಕ್ಷತೆ" ಕಾಪಾಡಿಕೊಂಡು ನಡೆಸುತ್ತಿರುವುದಕ್ಕೆ ತಮ್ಮ ಬೆಂಬಲ, ಸಹಕಾರ ಘೋಷಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ನಾನು ಪರಿಶೀಲನೆ ಸಭೆ ನಡೆಸಿದಾಗ ನನ್ನೊಡನೆ ಲೋಕಸಭಾ ಸದಸ್ಯರುಗಳು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಭಾಗವಹಿಸಿ ತಮ್ಮ ಆಸಕ್ತಿ ತೋರಿದ್ದಾರೆ. ಎಲ್ಲಾ ಚುನಾಯಿತ ಪ್ರತಿನಿಧಿಗಳು, ಉಸ್ತುವಾರಿ ಸಚಿವರು, ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಎಸ್ಎಸ್ಎಲ್ಸಿ ಪರೀಕ್ಷೆಗಳ ಸಿದ್ಧತೆ, ಮುನ್ನಚ್ಚರಿಕಾ ಕ್ರಮಗಳ ಜವಾಬ್ದಾರಿ ತೆಗೆದುಕೊಳ್ಳಲು ಕೈಜೋಡಿಸಿದ್ದಾರೆ. ಮಾಸ್ಕ್ಗಳನ್ನು ಕೊಡಲು, ವಿವಿಧ ರೀತಿಯ ನೆರವು ನೀಡಲು ಈ ಎಲ್ಲಾ ಸ್ನೇಹಿತರು ಮುಂದೆ ನಿಂತಿದ್ದಾರೆ.
ಇಂದು ಸಚಿವ ಸಂಪುಟದ ಸಭೆಯಲ್ಲಿಯೂ ಸಹ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುವ ಕುರಿತು ಎಲ್ಲಾ ಸಚಿವರೂ ತಮ್ಮ ಸಹಮತ ಹಾಗೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಸಂಗತಿಗಳೂ ನನಗೆ ಚೈತನ್ಯ ಹೆಚ್ಚಿಸಿವೆ ಎಂದು ಸಚಿವ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಸಂತಸ ಹಂಚಿಕೊಂಡಿದ್ದಾರೆ.