ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಹಿನ್ನೆಲೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಮಹಾನಗರ , ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಲ್ಲಿ ಸಿದ್ಧತೆ ಬಗ್ಗೆ ಸಭೆ ನಡೆಸಿದ್ದಾರೆ.
ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆ ಕುರಿತು ಸಚಿವ ಸುರೇಶ್‍ಕುಮಾರ್ ಸಭೆ - ಸಚಿವ ಸುರೇಶ್‍ಕುಮಾರ್
ಯಾವುದೇ ಹಂತದಲ್ಲಿ ಪರೀಕ್ಷೆ ಕುರಿತು ಒಂದೇ ಒಂದು ಅಪಸ್ವರ ಬಾರದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಕಾಸ ಸೌಧದಲ್ಲಿ , ನಗರ ಜಿಲ್ಲಾಧಿಕಾರಿ, ಬಿಬಿಪಿಂಪಿ ಉಪ ಆಯುಕ್ತರು, ಎಡಿಜಿಪಿ, ನಗರ ವ್ಯಾಪ್ತಿಯ ಡಿಸಿಪಿ, ಡಿಡಿಪಿಐಗಳು, ಬಿಇಒಗಳು ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು. ಮಹಾನಗರ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸರು ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಆರೋಗ್ಯ ಇಲಾಖೆ, ಸಾರಿಗೆ, ಮತ್ತು ಬಿಬಿಎಂಪಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುರೇಶ್ ಕುಮಾರ್ ಮಾರ್ಗದರ್ಶನ ನೀಡಿದರು. ಆರೋಗ್ಯಕರ ವಾತಾವರಣ, ಮಕ್ಕಳ ಸುರಕ್ಷತೆ, ಆರೋಗ್ಯ ತಪಾಸಣೆ, ಬಸ್ ಸೌಲಭ್ಯ ಸೇರಿದಂತೆ ಪರೀಕ್ಷೆ ನಡೆಸುವ ಕುರಿತು ಎಲ್ಲ ಇಲಾಖೆಗಳ ಸಮನ್ವಯದಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ವಿಶೇಷವಾಗಿ ಮಕ್ಕಳ ಸುರಕ್ಷತೆಗೆ ಈ ಪರೀಕ್ಷೆಯಲ್ಲಿ ಪ್ರಥಮ ಆದ್ಯತೆ ನೀಡಲು ಕಾಲಕಾಲಕ್ಕೆ ಸೂಚಿಸಲಾಗಿದೆ.
ಸೋಂಕು ನಿವಾರಕ ದ್ರಾವಣದಿಂದ ಪ್ರತಿ ಪರೀಕ್ಷೆ ಮುನ್ನ ಹಾಗೂ ನಂತರದ ಅವಧಿಗಳಲ್ಲಿ ಸ್ಯಾನಿಟೈಸ್ ಮಾಡುವುದು ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ಮಾಸ್ಕ್ ವಿತರಣೆಗೆ ಕ್ರಮ ವಹಿಸುವುದು, ಕಂಟೈನ್‌ಮೆಂಟ್ ವಲಯದಿಂದ ಬರುತ್ತಿರುವ ವಿದ್ಯಾರ್ಥಿಗಳಿಗೆ ಎನ್.95 ಮಾಸ್ಕ್ ವಿತರಿಸುವುದು, ಅನಾರೋಗ್ಯಕರ ವಿದ್ಯಾರ್ಥಿಗಳಿಗೆ ಹಾಗೂ ಕಂಟೈನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವುದು. ಸ್ವಯಂ ಸೇವಕರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ತರಬೇತಿ ನೀಡುವುದು. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಐಪಿಸಿ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವುದು ಸೇರಿದಂತೆ ಎಲ್ಲಾ ಅಧಿಕಾರಿಗಳು ಸಮರ್ಪಣ ಮನೋಭಾವದಿಂದ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಚಿವ ಸುರೇಶ್ ಕುಮಾರ್ ನಿರ್ದೇಶಿಸಿದ್ದಾರೆ.