ಕರ್ನಾಟಕ

karnataka

ETV Bharat / state

ಶಿಕ್ಷಕರ ವರ್ಗಾವಣೆ ಸಮಸ್ಯೆ: ಸೆಪ್ಟೆಂಬರ್ 3 ರಂದು ಸಭೆ ಕರೆದ ಸಚಿವ ಸುರೇಶ್ ಕುಮಾರ್‌

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಿದ ಹಿನ್ನಲೆ ಸಚಿವ ಸುರೇಶ್ ಕುಮಾರ್‌ ಇಲಾಖಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಸೆಪ್ಟೆಂಬರ್ 3 ರಂದು ಸಭೆ ನಡೆಸಿ ನಿರ್ಣಯ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಸಚಿವ ಸುರೇಶ್ ಕುಮಾರ್‌

By

Published : Aug 30, 2019, 10:45 PM IST

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ತಾತ್ಕಾಲಿಕವಾಗಿ ಮುಂದೂಡಿದ ಹಿನ್ನಲೆ ಸಚಿವ ಸುರೇಶ್ ಕುಮಾರ್‌ ಇಲಾಖಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಸೆಪ್ಟೆಂಬರ್ 3 ರಂದು ಸಭೆ ನಡೆಸಿ ಕೂಡಲೇ ನಿರ್ಣಯ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡುವಂತೆ ತಿಳಿಸಲಾಗಿದೆ. ಶಾಲಾ ಮಕ್ಕಳಿಗೆ ನೀಡುವ ಬೈಸಿಕಲ್‍ ಬಿಡಿಭಾಗಗಳ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ಪದೇ ಪದೇ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಪ್ರಯೋಗಾಲಯ ದಲ್ಲಿ ಗುಣಮಟ್ಟ ಪರೀಕ್ಷಿಸಿ ನಂತರ ಸೈಕಲ್ ವಿತರಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ..

ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಮನೆ-ಮಠ ಕಳೆದುಕೊಂಡು ಸಂತ್ತಸ್ತರಾದ ಕುಟುಂಬಗಳ ವಿದ್ಯಾರ್ಥಿಗಳಿಗೆ 11 ಲಕ್ಷ ಪುಸ್ತಕ, ನೋಟ್‍ಬುಕ್, ಪೆನ್ ಸೇರಿದಂತೆ ಪಠ್ಯೋಪಕರಣಗಳನ್ನು ನೀಡಲು ಕೂಡಲೇ ಕ್ರಮವಹಿಸಬೇಕು. ನೆರೆ ಸಂತ್ರಸ್ತರು ಶಾಲೆಗಳಲ್ಲಿ ಆಶ್ರಯ ತೆಗೆದುಕೊಂಡ ಸಂದರ್ಭದಲ್ಲಿ ಶಾಲೆ ನಡೆಯದ ದಿನಗಳು ಮತ್ತು ವಿಪರೀತ ಮಳೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ಆಯಾ ಜಿಲ್ಲಾಧಿಕಾರಿಗಳ ಆದೇಶದಂತೆ ರಜೆ ನೀಡಿದ ದಿನಗಳನ್ನು ಸರಿದೂಗಿಸಲು ಕ್ರಮಕೈಗೊಳ್ಳಲಾಗಿದ್ದು, ಆಯಾ ಶಾಲೆಗಳಿಗೆ ನೀಡಿದ ರಜಾದಿನಗಳಿಗೆ ಅನುಗುಣವಾಗಿ ಶಾಲಾ ದಿನಗಳನ್ನು ಸರಿದೂಗಿಸಲು ಕ್ರಮವಹಿಸುವಂತೆ ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಕೆಲ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್ ಇಂಜನಿಯರ್​ಗಳು ವಾರಾಂತ್ಯದ ದಿನಗಳಲ್ಲಿ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಮತ್ತು ಇತರೆ ವಿಷಯಗಳಲ್ಲಿ ಬೋಧನೆ ಮಾಡಲು ಇಂಗಿತ ವ್ಯಕ್ತಪಡಿಸಿದ್ದಾರೆ.‌ ಈ ಹಿನ್ನೆಲೆ ಅವರ ಸೇವೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುವುದರ ಬಗ್ಗೆ ವ್ಯವಸ್ಥೆ ರೂಪಿಸಿ ಡಿಡಿಪಿಐಗಳಿಗೆ ಮಾರ್ಗದರ್ಶನ ನೀಡಲು ಸೂಚನೆ ನೀಡಲಾಗಿದೆ. ಶಿಕ್ಷಕರ ಕೊರತೆಯ ಹಿನ್ನೆಲೆಯಲ್ಲಿ ಶಿಕ್ಷಕರ ನೇಮಕಾತಿ ವಿಧಾನವನ್ನು ಚುರುಕುಗೊಳಿಸಲು ನಿಗದಿತ ಸಮಯದೊಳಗೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ.‌ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಸಂದರ್ಭದಲ್ಲಿ ಮುಷ್ಕರದ ಆತಂಕ ಎದುರಾಗದಂತೆ ಮೊದಲೇ ಅಗತ್ಯ ಕ್ರಮಗಳನ್ನು ಕೈಗೊಂಡು ವ್ಯವಸ್ಥೆ ಮಾಡಲು ಸೂಚನೆ ನೀಡಲಾಯಿತು.

ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಗ್ರಾಮೀಣ ಶಿಕ್ಷಕರ ವರ್ಗಾವಣೆ ಆರಂಭಿಸುವಂತೆ ಸಚಿವ ಸುರೇಶ್ ಕುಮಾರ್‌ ಅವರೊಂದಿಗೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ್ ಲಕ್ಕಮ್ಮನವರ್, ಟಿ.ಕೆ. ನಾಗೇಶ್, ಶರಣಪ್ಪಗೌಡ, ಕೆ. ನಾಗರಾಜ್, ಶಾಂತಮ್ಮ ಮತ್ತಿತರರು ಮಾತುಕತೆ ನಡೆಸಿದರು..

ABOUT THE AUTHOR

...view details