ಕರ್ನಾಟಕ

karnataka

ETV Bharat / state

ಅನುದಾನಿತ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ವಿಸ್ತರಿಸುವಂತೆ ಪ್ರಸ್ತಾವನೆ: ಸಚಿವ ಸುರೇಶ್ ಕುಮಾರ್ - facilities for aided school teachers

ಅನುದಾನಿತ ಶಾಲೆಗಳ ಶಿಕ್ಷಕರಿಗೂ 'ಜ್ಯೋತಿ ಸಂಜೀವಿನಿ' ವಿಸ್ತರಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

suresh kumar
ಸಚಿವ ಸುರೇಶ್ ಕುಮಾರ್ ಸಭೆ

By

Published : Dec 15, 2020, 10:09 AM IST

ಬೆಂಗಳೂರು: ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಇರುವಂತೆ ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಾಲೆಗಳ ಶಿಕ್ಷಕರಿಗೂ ವಿಸ್ತರಿಸುವ ಕುರಿತಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಚರ್ಚಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರು, ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರ ಹಾಗೂ ಆಡಳಿತ ಮಂಡಳಿಗಳ ಹೋರಾಟ ಸಮನ್ವಯ ಸಮಿತಿ ಹಾಗೂ ರಾಜ್ಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಧಾರವಾಡದಲ್ಲಿ ನಡೆಯುತ್ತಿರುವ ಸತ್ಯಾಗ್ರಹದ ಹಿನ್ನೆಲೆಯಲ್ಲಿ, ಸೋಮವಾರ ಬೆಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಬಸವರಾಜ ಎಸ್. ಹೊರಟ್ಟಿ ಮತ್ತು ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ, ಸರ್ಕಾರಿ ನೌಕರರಿಗಿರುವ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದರು.

ಬಸವರಾಜ ಹೊರಟ್ಟಿಯವರ ನೇತೃತ್ವದ ಸಮಿತಿ ಸಲ್ಲಿಸಿರುವ ಕಾಲ್ಪನಿಕ ವೇತನ ಅನುಷ್ಠಾನದಿಂದಾಗುವ ಆರ್ಥಿಕ ಪರಿಣಾಮಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ ವಿವರವಾದ ವರದಿ ತಯಾರಿಸಿ ಸಂಪುಟದ ಮುಂದಿಡಲಾಗುವುದು. ಈ ಕುರಿತಂತೆ ವರದಿಯನ್ನು ಕಡತದಲ್ಲಿ ಮಂಡಿಸುವಂತೆ ಸಚಿವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಬಾಕಿ ವೇತನದ ಹೊರೆಯಿಲ್ಲದೇ ಮತ್ತು ಸರ್ಕಾರದ ಬೊಕ್ಕಸಕ್ಕೆ ಅನಾವಶ್ಯಕ ಹೊರೆಯಾಗದಂತೆ ಎಲ್ಲ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಸೌಲಭ್ಯವನ್ನು ಒದಗಿಸಲು ಸಿಎಂ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ವಿವರಿಸಿದರು.

ಎನ್.ಪಿ.ಎಸ್ ಪದ್ಧತಿ ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ ಮುಂದುವರೆಸುವುದು ಶಿಕ್ಷಣ ಇಲಾಖೆಯೊಂದೇ ತೆಗೆದುಕೊಳ್ಳಬೇಕಾದ ನಿರ್ಧಾರವಲ್ಲ. ಅದು ಎಲ್ಲ ಇಲಾಖೆಗಳಿಗೂ ಸಂಬಂಧಿಸಿದಾಗಿದ್ದು, ಇದು ನೀತಿನಿರೂಪಣಾ ವಿಷಯವಾಗಿರುವುದರಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲ ಇಲಾಖೆಗಳೂ ಸೇರಿ ಒಂದು ನಿರ್ಧಾರಕ್ಕೆ ಬರಬೇಕಿದೆ. ಹಳೇ ಪದ್ಧತಿಯನ್ನೇ ಮುಂದುವರೆಸುವುದು ಇಲ್ಲವೇ ಎನ್.ಪಿ.ಎಸ್ ಮುಂದುವರೆಸುವುದಾದರೆ ಉದ್ಯೋಗದಾತನ ವಂತಿಗೆಯನ್ನು ಸರ್ಕಾರವೇ ಭರ್ತಿ ಮಾಡಬೇಕೆಂಬ ಕುರಿತ ತಮ್ಮ ಆಗ್ರಹವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.
ದೈಹಿಕ ಶಿಕ್ಷಕರ ಬೇಡಿಕೆಗಳಿಗೆ ಸಂಬಂಧಿಸಿದ ಡಾ. ವೈದ್ಯನಾಥನ್ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಗೆ ಪ್ರಸ್ತಾಪಿಸಿದ್ದು, ಈ ಶಿಕ್ಷಕರನ್ನು ಇತರೆ ಶಿಕ್ಷಕರ ಸಾಲಿನಲ್ಲಿ ಸಮಾನವಾಗಿ ಗುರುತಿಸಲು ಅನುವಾಗುವಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
2015ರ ನಂತರ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಸೇರಿದಂತೆ ಹಲವಾರು ಕಾರಣಗಳಿಂದ ತೆರವಾಗಿರುವ ಹುದ್ದೆಗಳ ಭರ್ತಿಗೆ ಪ್ರಸ್ತುತ ಆರ್ಥಿಕ ಇಲಾಖೆಯ ನಿರ್ಬಂಧದ ತೆರವಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹಾಗೆಯೇ ಇದಕ್ಕೂ ಮುನ್ನ ರಾಜ್ಯದ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿಯಾಗಿರುವ ಹುದ್ದೆಗಳ ವಿವರಗಳನ್ನು ಶಾಲಾವಾರು ಸಂಗ್ರಹಿಸಿ ಸಲ್ಲಿಸಬೇಕೆಂದು ಸುರೇಶ್ ಕುಮಾರ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದರು.
ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಯ ಸೇವಾ ಭದ್ರತೆ ಆಯಾ ಆಡಳಿತ ಮಂಡಳಿಗಳ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಕಠಿಣ ಸುತ್ತೋಲೆಯನ್ನು ಕೂಡಲೇ ಜಾರಿ ಮಾಡುವುದಲ್ಲದೇ ವಿಚಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಸಚಿವರು ವಿವರಿಸಿದರು.
ಶಿಕ್ಷಕ ಮತ್ತು ವಿದ್ಯಾರ್ಥಿಗಳ ಪ್ರಸ್ತುತ ಅನುಪಾತ 1:70ಅನ್ನು 1:50ಕ್ಕೆ ಬದಲಾಯಿಸುವ ಕುರಿತು ಆಡಳಿತಾತ್ಮಕ ಅನುಮೋದನೆ ನೀಡುವ ಸಂಬಂಧದಲ್ಲಿ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚನೆ ನೀಡಿದರು. ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಸರ್ಕಾರಿ ಶಾಲಾ ಶಿಕ್ಷಕರಿಗೆ ನೀಡುವ ತರಬೇತಿಯನ್ನು ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದಲ್ಲಿ 100ಕ್ಕಿಂತ ಕಡಿಮೆ ಇರುವ ಶಾಲೆಗಳ ನೋಂದಣಿ ರದ್ದುಪಡಿಸಲು ಆ ಭಾಗದ ಆಯುಕ್ತರು ಹೊರಡಿಸಿರುವ ಆದೇಶ ಶಿಕ್ಷಣ ಅಧಿನಿಯಮದ ಆದೇಶಕ್ಕೆ ವಿರುದ್ಧವಾಗಿದ್ದು, ತಕ್ಷಣವೇ ಹಿಂಪಡೆಯಲು ಅಪರ ಆಯುಕ್ತರಿಗೆ ನಿರ್ದೇಶನ ನೀಡಬೇಕೆಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದರು.
ಸರ್ಕಾರವು ಎಲ್ಲ ಶಿಕ್ಷಕರ ಸಮಸ್ಯೆಯನ್ನು ಪರಿಹರಿಸಲು ತೆರೆದ ಮನಸ್ಸು ಹೊಂದಿದ್ದು, ಮೂರು ತಿಂಗಳ ಅವಧಿಯಲ್ಲಿ ಈಡೇರಿಸಲು ಸಾಧ್ಯವಾಗಬಹುದಾದ ಬೇಡಿಕೆಗಳನ್ನು ಅನುಷ್ಠಾನಗೊಳಿಸುವಲ್ಲಿ ಕ್ರಮ ವಹಿಸುತ್ತದೆ. ನಾಡಿನ ಮಕ್ಕಳ ಹಿತದೃಷ್ಟಿಯಿಂದ ಸಂಘಟನೆಯು ನಡೆಸುತ್ತಿರುವ ಪ್ರತಿಭಟನೆಯನ್ನು ಹಿಂಪಡೆಯಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದರು.

ಸಭೆಯಲ್ಲಿ ಮಾಜಿ ಶಿಕ್ಷಣ ಸಚಿವರೂ ಆದ ವಿಧಾನಪರಿಷತ್ ಸದಸ್ಯ ಬಸವರಾಜ ಎಸ್. ಹೊರಟ್ಟಿ, ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶಾಮ ಮಲ್ಲನಗೌಡ, ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ:ಹಾಸನ ಪೊಲೀಸರ ಮಿಂಚಿನ ಕಾರ್ಯಾಚರಣೆ; ರೌಡಿ ಶೀಟರ್‌ ಲಿಂಗರಾಜ್ ಕೊಲೆ ಆರೋಪಿಗಳ ಬಂಧನ

ABOUT THE AUTHOR

...view details