ಬೆಂಗಳೂರು:ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಲು ಇನ್ಮುಂದೆ ಎಲ್ಲ ಜಿಲ್ಲೆಗಳಲ್ಲಿ ಸಕಾಲ ಸಪ್ತಾಹ ಕಡ್ಡಾಯಗೊಳಿಸಬೇಕು. ಜೊತೆಗೆ ಎರಡು ಸಮಿತಿಗಳನ್ನು ರಚಿಸಬೇಕು ಎಂದು ಸಕಾಲ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ಎಲ್ಲಾ ಜಿಲ್ಲಾಧಿಕಾರಿ, ಜಿಪಂ ಸಿಇಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಕಾಲ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಎಲ್ಲ ಅಪರ ಜಿಲ್ಲಾಧಿಕಾರಿಗಳು ಪ್ರತಿ ಸೋಮವಾರ ಸಕಾಲ ವಿವರ ಪ್ರಗತಿ ಪರಿಶೀಲಿಸಬೇಕು. ಎಲ್ಲ ಕಚೇರಿಗಳ ಮುಂದೆ ಸಕಾಲದ ಮಾಹಿತಿ ಫಲಕ ಕಡ್ಡಾಯಗೊಳಿಸಬೇಕು. ಸಕಾಲ ಒಂದೇ ನಾಗರಿಕರಿಗೆ ಸರ್ಕಾರದ ಸೇವೆಯ ತೃಪ್ತಿ ಪಡಿಸುವ ಪ್ರಮುಖ ಯೋಜನೆ. ಈ ಬಗ್ಗೆ ಹೆಚ್ಚು ಆದ್ಯತೆ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಆದೇಶಿಸಿದರು.
ಉತ್ತಮ ಕಾರ್ಯನಿರ್ವಹಿಸಿದ ಜಿಲ್ಲೆಗಳಿಗೆ ಪುರಸ್ಕಾರ : ಜನವರಿ ತಿಂಗಳಿನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಸ್ಥಾನ, ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗ ಕ್ರಮವಾಗಿ 2 ಮತ್ತು 3 ನೇ ಸ್ಥಾನಗಳಿಸಿವೆ. ಬೆಂಗಳೂರು ನಗರ ಜಿಲ್ಲೆಗೆ ಕೊನೆಯ ಸ್ಥಾನ ದಕ್ಕಿದೆ. ತಾಲೂಕುವಾರು ತೆಗೆದುಕೊಳ್ಳುವುದಾದರೆ ಬೆಂಗಳೂರು ದಕ್ಷಿಣ ತಾಲೂಕು ಮೊದಲ ಸ್ಥಾನ ಪಡೆದಿದೆ ಎಂದು ಹೇಳಿದರು.