ಕರ್ನಾಟಕ

karnataka

ETV Bharat / state

ಎಸ್​ಎಸ್​ಎಲ್​ಸಿ ಪರೀಕ್ಷೆ: ಜಿಲ್ಲಾಡಳಿತಗಳಿಗೆ ಇದೊಂದು ಸವಾಲು ಎಂದ ಸಚಿವ ಸುರೇಶ್ ಕುಮಾರ್ - Video Conference with all districts DCs

ಕೊರೊನಾ ವೈರಸ್​ ಸೋಂಕು ಹಿನ್ನೆಲೆ ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆ ಸವಾಲಿನಿಂದ ಕೂಡಿದ್ದು, ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದರು.

Minister Suresh Kumar held Video Conference with all districts DCs
ರಾಜ್ಯದ ಎಲ್ಲ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಿದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್

By

Published : Jun 4, 2020, 5:01 PM IST

ಬೆಂಗಳೂರು : ಕೊರೊನಾ ಕಾಲಘಟ್ಟದಲ್ಲಿ ಹಾಗೂ ಉಚ್ಛ ನ್ಯಾಯಾಲಯದ ಕಣ್ಗಾವಲಿನಲ್ಲಿ ನಡೆಯತ್ತಿರುವ ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆಯ ಸುಗಮ ನಿರ್ವಹಣೆಯನ್ನು ಜಿಲ್ಲಾಡಳಿತಗಳು ಸವಾಲು ಮತ್ತು ಅವಕಾಶಗಳು ಎಂದು ಭಾವಿಸಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚಿಸಿದ್ದಾರೆ.

ಜೂ. 25ರಿಂದ ನಡೆಯುತ್ತಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಗಳ ಸುಗಮ ನಿರ್ವಹಣೆ ಹಿನ್ನೆಲೆಯಲ್ಲಿ ಇಂದು ವಿಕಾಸಸೌಧದಲ್ಲಿ ರಾಜ್ಯದ ಎಲ್ಲ ಡಿಸಿಗಳು, ಜಿಪಂ ಸಿಇಒ, ಎಸ್‍ಪಿ, ಜಿಲ್ಲಾ ಮತ್ತು ತಾಲೂಕು ಖಜಾನೆ ಅಧಿಕಾರಿಗಳು, ಡಿಡಿಪಿಐ, ಬಿಇಒ ಅವರೊಂದಿಗೆ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಮಾತನಾಡಿದ ಅವರು, ತಮ್ಮ ತಮ್ಮ ಜಿಲ್ಲೆಯ ಕೊರೊನಾ ವಾರಿಯರ್ಸ್​ಗಳ ನೇತೃತ್ವ ವಹಿಸಿ ಕೊರೊನಾ ಎದುರಿಸಿದಂತೆ ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆಗಳನ್ನು ಸಮರ್ಪಕವಾಗಿ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಕೈಗೊಳ್ಳುವಲ್ಲಿ ತಮ್ಮೆಲ್ಲರ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು.

ರಾಜ್ಯದ ಎಲ್ಲ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಿದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್

ಈ ಬಾರಿಯ ಪರೀಕ್ಷೆ ಉಚ್ಛ ನ್ಯಾಯಾಲಯದ ಸ್ಪಷ್ಟ ಆದೇಶದಂತೆ ಶಿಕ್ಷಣ, ಆರೋಗ್ಯ, ಗೃಹ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ಸಮನ್ವಯದಲ್ಲಿ ನಡೆಯುತ್ತಿರುವುದರಿಂದ ಯಾವುದೇ ಒಬ್ಬ ವಿದ್ಯಾರ್ಥಿಯೂ ಯಾವುದೇ ಕಾರಣದಿಂದಲೂ ಪರೀಕ್ಷೆಯಿಂದ ವಂಚಿತರಾಗಬಾರದು. ಪ್ರತಿ ವಿದ್ಯಾರ್ಥಿಯೂ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತೆ ಮಾಡುವಲ್ಲಿ ಜಿಲ್ಲಾಡಳಿತದ ಹೊಣೆಗಾರಿಕೆ ಈ ಬಾರಿ ಎಂದಿಗಿಂತ ಹೆಚ್ಚಾಗಿದ್ದು, ಅದಕ್ಕಾಗಿ ಸಮರೋಪಾದಿಯಲ್ಲಿ ಈಗಿನಿಂದಲೇ ಎಲ್ಲ ಪರೀಕ್ಷಾ ಪೂರ್ವ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಪರೀಕ್ಷೆ ವಿರೋಧಿಗಳು, ವದಂತಿ ಕೋರರಂತಹ ವ್ಯಕ್ತಿಗಳು ಪರೀಕ್ಷೆ ಕುರಿತಂತೆ ಮಕ್ಕಳಲ್ಲಿ ಗೊಂದಲ ಮೂಡಿಸುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಈ ಮೊದಲೇ ಅಂತಹ ವ್ಯಕ್ತಿಗಳನ್ನು ಗಮನಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಅಲ್ಲದೇ ಪರೀಕ್ಷಾ ಕೇಂದ್ರದ ಬಳಿ ಅಂತಹ ವ್ಯಕ್ತಿಗಳು ಸುಳಿದಾಡಿ, ಚೆನ್ನಾಗಿ ಓದಿ ಪರೀಕ್ಷೆಗೆ ಸಜ್ಜಾಗಿ ಬಂದ ಪರೀಕ್ಷಾರ್ಥಿಗಳಲ್ಲಿ ಆತ್ಮವಿಶ್ವಾಸ ಕದಡುವಂತಹ ಸಾಧ್ಯತೆಗಳಿರುವ ಕಾರಣ ಪರೀಕ್ಷಾ ಕೇಂದ್ರ ಮತ್ತು ಉತ್ತರ ಪತ್ರಿಕೆಗಳ ಸಂಗ್ರಹಣಾ ಕೇಂದ್ರಗಳನ್ನು ಚುನಾವಣಾ ಸ್ಟ್ರಾಂಗ್​ ರೂಮ್​ಗಳಿಗೆ ಕೈಗೊಳ್ಳುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಸುರೇಶ್ ಕುಮಾರ್ ಸೂಚನೆ ನೀಡಿದರು.

ಮಳೆಯಿಂದ ಸೋಂಕುವಂತಿದ್ದರೆ ತಕ್ಷಣವೇ ಆ ಕೊಠಡಿಗಳನ್ನು ಬದಲಿಸುವುದು, ಮಳೆಗಾಲದಲ್ಲಿ ವಿದ್ಯುತ್ ಕೈಕೊಡುವುದರಿಂದ ಪರೀಕ್ಷಾ ಕೊಠಡಿಯಲ್ಲಿ ಕತ್ತಲಾಗದಂತೆ ಅದಕ್ಕೆ ಅಗತ್ಯವಾದ ಬೆಳಕಿನ ವ್ಯವಸ್ಥೆಯನ್ನು ಶಾಲಾ ಸಂಚಿತನಿಧಿ ಬಳಸಿ ಪರ್ಯಾಯ ವ್ಯವಸ್ಥೆ ಮಾಡುವುದು, ಪರೀಕ್ಷಾ ಕೇಂದ್ರದ ಸುತ್ತ 144ನೇ ಕಲಂ ನಿಷೇಧಿತ ಪ್ರದೇಶ ಘೋಷಿಸುವುದು, ಕೆಲ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳು ಕ್ವಾರಂಟೈನ್ ಕೇಂದ್ರಗಳಾಗಿದ್ದರೆ, ಜಿಲ್ಲಾಧಿಕಾರಿಗಳು ತಕ್ಷಣವೇ ಅಂತಹ ಕೇಂದ್ರಗಳಲ್ಲಿನ ಕೊರೊನಾ ಶಂಕಿತರನ್ನು ಬೇರೆಡೆಗೆ ಸ್ಥಳಾಂತರಿಸಿ ಅವುಗಳನ್ನು ಸ್ಯಾನಿಟೈಸೇಷನ್ ಮಾಡಿ ತಕ್ಷಣವೇ ಶಿಕ್ಷಣ ಇಲಾಖೆಗೆ ವಹಿಸಬೇಕೆಂದು ಸೂಚಿಸಿದರು.

ವಿಶೇಷವಾಗಿ ದಕ್ಷಿಣಕನ್ನಡ, ಯಾದಗಿರಿ, ಬೆಳಗಾವಿ ಜಿಲ್ಲೆಗಳಂತಹ ಪರೀಕ್ಷಾ ಕೇಂದ್ರಗಳಿಗೆ ಗಡಿಯಾಚೆಯಿಂದ ಬರುವ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ಸಾರಿಗೆ ವ್ಯವಸ್ಥೆ ಮಾಡುವುದು, ಯಾವುದೇ ಹಳ್ಳಿಯಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ವಾಹನ ಸೌಕರ್ಯವಿಲ್ಲದ ಮಕ್ಕಳಿಗೆ ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ಸಾರಿಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ತನಕ ಹಾಸ್ಟೆಲ್ ವಾಸಿ ಮಕ್ಕಳು, ವಲಸೆ ಕಾರ್ಮಿಕರ ಮಕ್ಕಳು ಮತ್ತು ಗಡಿಯಾಚೆಗಿನ ಒಟ್ಟು 12,674 ಮಕ್ಕಳು ತಮ್ಮ ಸನಿಹದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಂಡಿದ್ದು, ಅವರಿಗೆ ಬದಲಿ ಹಾಲ್​ ಟಿಕೆಟ್ ನೀಡಲಾಗುತ್ತಿದ್ದು, ಅವರಿಗೆಲ್ಲ ತಮ್ಮ ಇಚ್ಛಿತ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ರಾಜ್ಯದ ಎಲ್ಲ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಿದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್

ಪರೀಕ್ಷಾ ಸಿದ್ಧತೆ ಕುರಿತಂತೆ ಈಗಾಗಲೇ ತಾವು ರಾಜ್ಯದ 19 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ವಾರದೊಳಗೆ ಉಳಿದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇನೆ. ಈ ಬಾರಿಯ ಪರೀಕ್ಷೆ ಸಂಕ್ರಮಣ ಕಾಲಘಟ್ಟದಲ್ಲಿ ನಡೆಯಲಿರುವುದರಿಂದ ಇಡೀ ಪರೀಕ್ಷೆಗಳು 'ಇನ್ಸಿಡೆಂಟ್ ಫ್ರೀ'/ಪ್ರಸಂಗ ರಹಿತವಾಗಿ ನಡೆಯವಂತೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಸಚಿವರು ವಿವರವಾಗಿ ತಿಳಿಸಿದರು. ಇದೇ ವೇಳೆ, ಆಯಾ ಜಿಲ್ಲಾಧಿಕಾರಿಗಳು ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡರು.

ವಿಡಿಯೋ ಕಾನ್ಫರೆನ್ಸ್​ನಲ್ಲಿ ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾಶಿಇ ಆಯುಕ್ತ ಡಾ. ಕೆ.ಜಿ.ಜಗದೀಶ್, ಎಸ್‍ಎಸ್‍ಎ ಎಸ್‍ಪಿಡಿ ಡಾ. ಎಂ.ಟಿ. ರೇಜು ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ABOUT THE AUTHOR

...view details