ಬೆಂಗಳೂರು:ಕೊರೊನಾ ಮಾಹಿತಿ ನಿರ್ವಹಣೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ನೇಮಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇಲಾಖೆಗೆ ಸಂಬಂಧ ಪಡದ, ಸಂಸದೀಯ ಖಾತೆಯೂ ಇಲ್ಲದ ಸುರೇಶ್ ಕುಮಾರ್ ಅವರನ್ನು ಕೋವಿಡ್-19 ಸೋಂಕು ನಿರ್ವಹಣಾ ಜವಾಬ್ದಾರಿ ನೀಡಿದ ಮುಖ್ಯಮಂತ್ರಿಗಳ ನಡೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಪ್ರಶ್ನಿಸಿದ್ದಾರೆ.
ಕೊರೊನಾ ಮಾಹಿತಿ ನಿರ್ವಹಣಾ ಜವಾಬ್ದಾರಿ ಸಚಿವ ಸುರೇಶ್ ಕುಮಾರ್ಗೆ: ಪರಿಷತ್ ಮಾಜಿ ಸದಸ್ಯ ಆಕ್ಷೇಪ
ಕೊರೊನಾ ಮಾಹಿತಿ ನಿರ್ವಹಣೆ ಜವಾಬ್ದಾರಿಯನ್ನು ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲುಗೆ ನೀಡದೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ನೀಡಿರೋದಕ್ಕೆ ಕೆಲವರಿಂದ ಆಕ್ಷೇಪ ವ್ಯಕ್ತವಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಮೇಶ್ ಬಾಬು, ನಮ್ಮ ರಾಜ್ಯದ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರನ್ನೇ ಕ್ವಾರಂಟೈನ್ನಲ್ಲಿ ಇಟ್ಟು ಕೊರೊನಾ ಮಾಹಿತಿ ನಿರ್ವಹಣೆ ಜವಾಬ್ದಾರಿಯನ್ನು ಸುರೇಶ್ ಕುಮಾರ್ಗೆ ವಹಿಸಿದ್ದಾರೆ. ಇವರನ್ನು ಕ್ವಾರಂಟೈನ್ನಲ್ಲಿಡಲು ಮುಖ್ಯಮಂತ್ರಿಗೆ ಬಂದ ಅನುಮಾನವೇನು? ಎಂದು ಪ್ರಶ್ನಿಸಿದ್ದಾರೆ.
ಇದರ ಜೊತೆಗೆ ಕೊರೊನಾದಿಂದ ರಾಜ್ಯದ ಜನ ತತ್ತರಿಸಿರುವಾಗ ಸರ್ಕಾರದಿಂದ ಸಹಜವಾಗಿ ಪರಿಹಾರ ಬಯಸುತ್ತಾರೆ. ಈ ಸಂದರ್ಭದಲ್ಲಿ ನಿಮ್ಮ ಗುಂಪುಗಾರಿಕೆ ನಮಗೆ ಅನಾವಶ್ಯಕ. ಇದ್ದರೂ ಅದು ನಿಮ್ಮ ನಿಮ್ಮಲ್ಲೇ ಬಗೆಹರಿಯಲಿ. ಕೊರೊನಾ ವಿರುದ್ಧ ಸರ್ಕಾರದ ಜೊತೆಗೆ ಜನಸಾಮಾನ್ಯರೂ ಕೈಜೋಡಿಸಿದ್ದಾರೆ. ಮುಖ್ಯಮಂತ್ರಿಗಳು ಎಲ್ಲಾ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.