ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿ ದಿನವೂ ಜನರನ್ನು ಸಂಪರ್ಕಿಸಿ ಪರೀಕ್ಷೆ ಕುರಿತು ಜನರಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಚಾಯ್ ಪೆ ಚರ್ಚಾ, ಟಾಕ್ ವಿತ್ ಪೀಪಲ್ ಎನ್ನುತ್ತಾ ಜನಜಾಗೃತಿ ಮೂಡಿಸುತ್ತಿದ್ದಾರೆ.
ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ರದ್ದು ಮಾಡುವುದಿಲ್ಲ. ಪರೀಕ್ಷೆ ನಿಗದಿತ ದಿನಾಂಕದಂದೇ ನಡೆಯಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳುತ್ತಿದ್ದಂತೆ ಪರೀಕ್ಷೆ ನಡೆಸುವ ಪರ ಹಾಗೂ ವಿರುದ್ಧ ಚರ್ಚೆಗಳು ಆರಂಭಗೊಂಡಿವೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ, ಟಿಪ್ಪಣಿಗಳು ಬರುತ್ತಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತೊಂದು ಸುತ್ತಿನ ಜನಾಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟು ಪರೀಕ್ಷೆಯ ಅಗತ್ಯತೆ ಕುರಿತು ಮಾಹಿತಿ ನೀಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡು ಹೆಚ್ಚು ಹೆಚ್ಚು ಜನರನ್ನು ತಲುಪುವ ಪ್ರಯತ್ನ ನಡೆಸುತ್ತಿದ್ದಾರೆ.
ಚಾಯ್ ಪೆ ಚರ್ಚಾ :ಇಂದು ಬೆಳಗ್ಗೆ ಶಿಕ್ಷಣ ಇಲಾಖೆಯ ಕೆಲ ವಿಚಾರಗಳ ಕುರಿತು ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ಓರ್ವ ಅನುಭವಿ ಗೆಳೆಯನ ಜೊತೆ ಸಚಿವ ಸುರೇಶ್‌ಕುಮಾರ್ ಚರ್ಚೆ ನಡೆಸಿದರು. ನಂತರ ಸಮೀಪದ ಬೈಟು ಕಾಫಿ ಕ್ಯಾಂಟೀನ್ ಬಳಿ ಹೋಗಿ ಬಿಸಿ ಬಿಸಿ ಇಡ್ಲಿ ಸವಿದಿದ್ದಾರೆ. ಈ ವೇಳೆ ಚಹಾ ಹೀರುತ್ತಾ ಸುತ್ತ ನೆರೆದವರ ಜೊತೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣ, ಸ್ಕೂಲ್‌ಗಳ ಪ್ರಾರಂಭ, ಆನ್ಲೈನ್ ತರಗತಿಗಳ ವಿಚಾರ, ಎಸ್ಎಸ್ಎಲ್‌ಸಿ ಪರೀಕ್ಷೆಗಳು ಹೀಗೆ ಎಲ್ಲದರ ಬಗ್ಗೆಯೂ ಚರ್ಚಿಸಿದ್ದಾರೆ. ಅಗತ್ಯ ಕೆಲ ಮಾಹಿತಿ ಪಡೆಯುವ ಜೊತೆಗೆ ತಮ್ಮ ಅಭಿಪ್ರಾಯಗಳನ್ನೂ ಸಚಿವರ ಮುಂದೆ ಜನರು ವ್ಯಕ್ತಪಡಿಸಿದ್ದಾರೆ.
ಟಾಕ್ ವಿತ್ ಆಟೋ ಪ್ಯಾಸೆಂಜರ್ :ಅದರಂತೆಯೇ ಪ್ಯಾಲೇಸ್ ರಸ್ತೆಯಲ್ಲಿ ಬರುತ್ತಿದ್ದಾಗ ಆರು ಜನರನ್ನು ಕರೆದೊಯ್ಯುತ್ತಿದ್ದ ಆಟೋ ಒಂದನ್ನ ನೋಡಿದ ಸಚಿವ ಸುರೇಶ್‌ಕುಮಾರ್, ಆಟೋ ಬಳಿ ಹೋಗಿ ಕೊರೊನಾ ಕಾಲದಲ್ಲಿ ಸಾಮಾಜಿಕ ಅಂತರ ಬಹಳ ಮುಖ್ಯ, ಈ ರೀತಿ ಗುಂಪಾಗಿ ಪ್ರಯಾಣ ಸರಿಯಲ್ಲ. ಇದು ಹೇಗೆ ಅಪಾಯಕಾರಿ ಎಂದು ತಿಳುವಳಿಕೆ ನೀಡಿದ್ದಾರೆ. ನಂತರ ಎಸ್ಎಸ್ಎಲ್‌ಸಿ ಪರೀಕ್ಷೆ, ಮಕ್ಕಳ ಆನ್‌ಲೈನ್ ಶಿಕ್ಷಣ ಕುರಿತು ಆಟೋದಲ್ಲಿನ ಮಹಿಳೆಗೆ ತಿಳುವಳಿಕೆ ನೀಡುವ ಪ್ರಯತ್ನ ನಡೆಸಿದರು.
ತುಮಕೂರು ರಸ್ತೆಯ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಇಂಧನ ತುಂಬಿಸುತ್ತಿದ್ದಾಗಲೂ ಪರೀಕ್ಷೆ ಕುರಿತು ಸಮೀಪದಲ್ಲಿನ ಜನರೊಂದಿಗೆ ಸಚಿವ ಸುರೇಶ್‌ಕುಮಾರ್ ಚರ್ಚೆ ನಡೆಸಿದ್ದಾರೆ. ಎಸ್ಎಸ್ಎಲ್‌ಸಿ ಪರೀಕ್ಷೆ ಅನಿವಾರ್ಯತೆ ಮನವರಿಕೆ ಮಾಡುಕೊಡುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬಂದು ಧನ್ಯವಾದ ತಿಳಿಸಿದ್ದಾರೆ. ಆನ್‌ಲೈನ್ ಕ್ಲಾಸ್ ನಿಲ್ಲಿಸಿದ್ದು ಬಹಳ ಒಳ್ಳೆಯದಾಯ್ತು. ನನ್ನ ಮಗ 3ನೇ ಕ್ಲಾಸ್ ಓದುತ್ತಿದ್ದಾನೆ. ಪ್ರತಿದಿನ ಎರಡು ಗಂಟೆ ಅವರ ಸ್ಕೂಲ್ ನಡೆಸುತ್ತಿದ್ದ ಆನ್‌ಲೈನ್ ಕ್ಲಾಸ್‌ನ ನೋಡಿ ಕಣ್ಣು ನೋವು, ತಲೆನೋವು ಎಂದು ಒದ್ದಾಡುತ್ತಿದ್ದ ಎಂದು ಬೇಸರ ಪಟ್ಟು, ಈಗ ಆನ್‌ಲೈನ್ ಕ್ಲಾಸ್ ನಿಲ್ಲಿಸಿದ್ದು ಅವನಿಗೆ ಒಳ್ಳೆಯದಾಗಿದೆ ಎನ್ನುತ್ತಾ ಧನ್ಯವಾದಗಳನ್ನು ಹೇಳಿ ಹೊರಟರು ಎಂದು ಸಚಿವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪ್ರತಿದಿನ ಇದೇ ರೀತಿ ಜನರೊಂದಿಗೆ ಬೆರೆತು ಎಸ್ಎಸ್ಎಲ್‌ಸಿ ಪರೀಕ್ಷೆ ಮತ್ತು ಆನ್‌ಲೈನ್ ಶಿಕ್ಷಣ ಕುರಿತು ಅಭಿಪ್ರಾಯ ಸಂಗ್ರಹಿಸಿ ಮನವರಿಕೆ ಮಾಡಿಕೊಡಲು ಪ್ರಯತ್ನ ನಡೆಸ್ತಿದ್ದಾರೆ ಸಚಿವ ಸುರೇಶ್ ಕುಮಾರ್.