ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಗೆ ಎಷ್ಟಾದರೂ ಶಿಫಾರಸು ಮಾಡಲಿ ಆದರೆ, ಅವರ ಸಾಧನೆಯೇ ಮಾನದಂಡವಾಗಿರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯೋತ್ಸವ ಪ್ರಶಸ್ತಿಗಾಗಿ ನಾಲ್ಕೂವರೆ ಸಾವಿರ ಅರ್ಜಿಗಳು ಬಂದಿವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಚರ್ಚೆ ನಡೆಯುತ್ತಿದೆ. ಸೇವಾ ಸಿಂಧು ಮೂಲಕ ಅರ್ಜಿ ಕರೆಯಲಾಗಿದೆ. ನನಗೆ ಪ್ರಶಸ್ತಿ ಬೇಕು ಅನ್ನುವವರ ಸಂಖ್ಯೆ ಕಡಿಮೆ ಆಗಬೇಕು. ಇಂತವರಿಗೆ ಕೊಡಬೇಕು ಅಂತ ಶಿಫಾರಸು ಮಾಡುವವರ ಸಂಖ್ಯೆ ಹೆಚ್ಚಿದೆ ಎಂದರು.
ಮಾತಾಡ್ ಮಾತಾಡ್ ಕನ್ನಡ ಅಭಿಯಾನ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆರು ರೀತಿಯ ಅಭಿಯಾನ ನಡೆಯಲಿದೆ. ಕನ್ನಡಕ್ಕಾಗಿ ನಾವು ಮಾತಾಡ್ ಮಾತಾಡ್ ಕನ್ನಡ ಎಂದು ಅ. 25 ರಿಂದ 30ರ ವರೆಗೆ ಮಾತಾಡ್ ಮಾತಾಡ್ ಕನ್ನಡ ಎಂಬ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲೂ ಜಾಗತೀಕರಣದ ಪ್ರಭಾವ ಬೀರುತ್ತಿದೆ. ಈ ಹಿನ್ನೆಲೆ ಕನ್ನಡ ಭಾಷೆಯನ್ನು ಎಲ್ಲರ ಮನೆಗೆ ತಲುಪಿಸುವ ಯತ್ನ ಇದಾಗಿದೆ. ಭಾಷೆಯ ಜೊತೆ ಸಂಸ್ಕೃತಿ ಇದೆ. ಉಡುಗೆ ತೊಡುಗೆ ಇದೆ. ಅದಕ್ಕೆ ಪೂರಕವಾಗಿ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ. ನಮ್ಮ ನಾಡಿನ ಭಾಷೆ, ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ತಲುಪಿಸುವ ಅಗತ್ಯ ಇದೆ.
ಕನಿಷ್ಠ ಒಂದು ವಾರದ ಕಾಲ ಕನ್ನಡದಲ್ಲೇ ಬರೆಯುತ್ತೇವೆ, ಕನ್ನಡದಲ್ಲೇ ಅಭ್ಯಸಿಸುತ್ತೇವೆ. ಕನ್ನಡದಲ್ಲೇ ವ್ಯವಹರಿಸುತ್ತೇವೆ ಎಂದು ಪಣ ತೊಡಬೇಕು. ಮಕ್ಳಳ ಜೊತೆ ವ್ಯವಹರಿಸುವಾಗ ಕನ್ನಡದಲ್ಲೇ ಮಾತನಾಡೋಣ. ಕನ್ನಡದಲ್ಲೇ ಸಹಿ ಹಾಕಬೇಕು. ಹೊರ ರಾಜ್ಯದವರು ಕನಿಷ್ಠ ನೂರು ಶಬ್ದಗಳಲ್ಲಿ ಕನ್ನಡ ಮಾತನಾಡುವಂತೆ ಮನವಿ ಮಾಡಿದರು.