ಬೆಂಗಳೂರು :ವಿದ್ಯುತ್ ಮಾರ್ಗ ಬದಲಾವಣೆ, ಹೊಸ ಉಪ ವಿಭಾಗ ನಿರ್ಮಾಣ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಹಾಗಾಗಿ, ವಿದ್ಯುತ್ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಒಪ್ಪಿಗೆ ಕೊಟ್ಟ ನಂತರ ವಿದ್ಯುತ್ ವಿತರಣಾ ಕಂಪನಿಗಳು ದರ ಪರಿಷ್ಕರಣೆ ಮಾಡಲಿವೆ ಎಂದು ಇಂಧನ ಖಾತೆ ಸಚಿವ ಸುನೀಲ್‍ಕುಮಾರ್ ಹೇಳಿದ್ದಾರೆ.
ವಿದ್ಯುತ್ ದರ ಏರಿಕೆ ಕುರಿತಂತೆ ಇಂಧನ ಖಾತೆ ಸಚಿವ ಸುನೀಲ್‍ಕುಮಾರ್ ಮಾತನಾಡಿಪುವುದು.. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 4 ಸಾವಿರ ಕೋಟಿ ರೂ. ಸೇರಿದಂತೆ ಬೆಂಗಳೂರು ಜಲ ಮಂಡಳಿ, ನಗರಾಭಿವೃದ್ಧಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ 12 ಸಾವಿರ ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇದೆ.
ಈಗಾಗಲೇ ಇಲಾಖಾವಾರು ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿದ್ಯುತ್ ಬಾಕಿ ಪಾವತಿಗೆ ಪ್ರಯತ್ನ ಮಾಡಲಾಗುವುದು. ನಮಗೆ ವಿಶ್ವಾಸ ಇದೆ. ಹಂತ-ಹಂತವಾಗಿ ವಿದ್ಯುತ್ ಬಿಲ್ ಪಾವತಿಯಾಗಲಿದೆ ಎಂದರು.
ಕಲ್ಲಿದ್ದಲು ಸಮಸ್ಯೆ ಇಲ್ಲ :ಸದ್ಯಕ್ಕೆ ರಾಜ್ಯದಲ್ಲಿ ಕಲ್ಲಿದ್ದಲು ಸಮಸ್ಯೆ ಇಲ್ಲ. ವಿದ್ಯುತ್ ಬಳಕೆ ಪ್ರಮಾಣ 15,000 ಮೆಗಾವ್ಯಾಟ್‍ನಷ್ಟಿದೆ. ಈ ಬಾರಿ ಮಳೆ ಚೆನ್ನಾಗಿ ಆಗಿರುವುದರಿಂದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುವುದಿಲ್ಲ. ಟಿಸಿ ಸುಟ್ಟು ಹೋದ 24 ಗಂಟೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅದೇ ರೀತಿ ಟಿಸಿ ಸುಡದಂತೆ ಎಚ್ಚರಿಕೆ ವಹಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಣ ಪಾವತಿಸಿದ 30 ದಿನಗಳಲ್ಲಿ ಗಂಗಾಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಶಾಲಾ ಆವರಣದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ ಎಂದರು.
ಖಾಲಿ ಹುದ್ದೆ ಭರ್ತಿ : ಇಂಧನ ಇಲಾಖೆಯಲ್ಲಿ ಖಾಲಿ ಇದ್ದ 1872 ಕಿರಿಯ ಪವರ್ ಮ್ಯಾನ್ ಮತ್ತು ಕಿರಿಯ ಪರಿಚಾರಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಆಯ್ಕೆ ಪಟ್ಟಿ ಪ್ರಕಟವಾಗಿದೆ. 15 ದಿನಗಳಲ್ಲಿ ಅಭ್ಯರ್ಥಿಗಳಿಗೆ ಆದೇಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸಚಿವ ಸಂಪುಟ ಪುನಾರಚನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಕೇಂದ್ರದ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ಕೈಗೊಳ್ಳುವ ತೀರ್ಮಾನ ಸ್ವಾಗತಿಸುವುದಾಗಿ ಸಚಿವ ಸುನೀಲ್ ಕುಮಾರ್ ತಿಳಿಸಿದರು.
ಓದಿ:ಸಚಿವ ಕೋಟ, ಸುನಿಲ್ ಕುಮಾರ್ ರಾಜೀನಾಮೆ ನೀಡಲಿ: ಐವನ್ ಡಿಸೋಜ ಒತ್ತಾಯ