ಬೆಂಗಳೂರು: ಅಮೃತ ಭಾರತಿಗೆ ಕನ್ನಡದಾರತಿ ಹೆಸರಿನಲ್ಲಿ ವರ್ಷಪೂರ್ತಿ ಅಭಿಯಾನ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ ಎಂದು ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಮೃತ ಮಹೋತ್ಸವ 2022ರ ಅಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಎರಡು ತಿಂಗಳಿಂದ ರಾಜ್ಯಾದ್ಯಂತ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಬೇಕು ಎಂಬ ಉದ್ದೇಶದಿಂದ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ಸಚಿವ ವಿ. ಸುನೀಲ್ ಕುಮಾರ್ ಅವರು ಮಾತನಾಡಿದರು ವಿವಿಧ ಹಂತಗಳಲ್ಲಿ ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚನೆ ನೀಡಿದ ಹಿನ್ನೆಲೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮೇ 28ರಂದು ಮೊದಲ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರ್ಯ ಹೋರಾಟ ನಡೆದ ರಾಜ್ಯದ 75 ಸ್ಥಳಗಳನ್ನು ಗುರುತಿಸಿ ಅಲ್ಲಿ ಈ ಕಾರ್ಯಕ್ರಮ ಏಕಕಾಲದಲ್ಲಿ ನಡೆಯಲಿದೆ ಎಂದರು.
ಸ್ವಾತಂತ್ರ ಹೋರಾಟಕ್ಕೆ ಕನ್ನಡದ ಕೊಡುಗೆಯನ್ನು ಯುವಪೀಳಿಗೆಗೆ ಹಾಗೂ ಜನಮಾನಸಕ್ಕೆ ಅತ್ಯಂತ ವ್ಯವಸ್ಥಿತವಾಗಿ ತಿಳಿಸಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಈ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಜನರಿಗೆ ನೆನಪಿಸಿಕೊಳ್ಳಬೇಕು ಎಂಬುದು ಅಮೃತ ಮಹೋತ್ಸವದ ಆಶಯವಾಗಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.
ನೂರಾರು ಹೋರಾಟ ನಡೆದಿವೆ:ರಾಜ್ಯದ ನೂರಾರು ಸ್ಥಳಗಳಲ್ಲಿ ಹೋರಾಟಗಳು ನಡೆದಿವೆ ಮತ್ತು ಬಲಿದಾನ ಆಗಿದೆ. ಈ ಕಾರ್ಯಕ್ರಮದ ಮೂಲಕ ಏಕಕಾಲಕ್ಕೆ ಎಲ್ಲ ಸ್ಥಳಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ 75 ಸ್ಥಳಗಳನ್ನು ಪ್ರಮುಖವಾಗಿ ಗುರುತಿಸಿ ಅಲ್ಲಿ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಿದ್ದೇವೆ. ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಪೋರ್ಚುಗೀಸರ ವಿರುದ್ಧ ಮೊದಲ ಹೋರಾಟ ನಡೆದಿದ್ದು, ಮಂಗಳೂರಿನ ಉಳ್ಳಾಲದಲ್ಲಿ. ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದೇ ಕರೆಸಿಕೊಳ್ಳುವ ವಿದುರಾಶ್ವತ, ಬೀದರ್ನ ಗುರೋಟಾ, ರಾಣಿ ಚೆನ್ನಮ್ಮ ಮದಕರಿ ನಾಯಕ ಸೇರಿದಂತೆ ನೂರಾರು ಸ್ಥಳಗಳಲ್ಲಿ ಸ್ವಾತಂತ್ರ ಹೋರಾಟಕ್ಕೆ ಕರ್ನಾಟಕದ ಕೊಡುಗೆ ಬಹಳಷ್ಟಿದೆ. ಸಾಕಷ್ಟು ಕಡೆ ವಿವಿಧ ಇತಿಹಾಸಗಳನ್ನು ಸೇರ್ಪಡೆ ಮಾಡಲು ಸಾಧ್ಯವಾಗಿಲ್ಲ. ಅದೆಲ್ಲವನ್ನು ಮತ್ತೆ ಜನರಿಗೆ ನೆನಪಿಸಿಕೊಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಪ್ರತ್ಯೇಕ ಪುಸ್ತಕ:ಕಾರ್ಯಕ್ರಮ ನಡೆಯುವ ಎಲ್ಲಾ 75 ಸ್ಥಳಗಳ ಕುರಿತು ಪ್ರತ್ಯೇಕ ಪುಸ್ತಕವನ್ನು ಸಿದ್ಧಪಡಿಸಿದ್ದೇವೆ. ಮೊದಲ ಹಂತದಲ್ಲಿ 45 ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಇರುವ ಹಿನ್ನೆಲೆ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು, ಉಳಿದ 30 ಸ್ಥಳಗಳಲ್ಲಿ ಜೂನ್ 25ರಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಕೊಟ್ಟರೆ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪೂರ್ವಸಿದ್ಧತಾ ಸಭೆ ನಡೆಸಿದ್ದೇವೆ. ಜನ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಸಭೆಯಲ್ಲಿ ಪಾಲ್ಗೊಂಡು ಉತ್ತಮ ಸಲಹೆ ಸೂಚನೆ ನೀಡಿದೆ. ಸುಮಾರು ಮೂರರಿಂದ ಐದು ಸಾವಿರ ಮಂದಿ ಪ್ರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಒಂದು ಸರ್ಕಾರ ಇಲಾಖೆಯ ಕಾರ್ಯಕ್ರಮ ಎಂದು ಭಾವಿಸದೇ ಸಮಾಜದ ಕಾರ್ಯಕ್ರಮ ಎಂದು ಜನ ಭಾವಿಸಬೇಕು ಹಾಗೂ ಅದನ್ನು ಸ್ವೀಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರು ಅಮೃತ ಭಾರತಿಗೆ ಕನ್ನಡದಾರತಿ ಬ್ರೋಷರ್, ವಿಶೇಷ ಕಾರ್ಯಕ್ರಮದ ಟೀಸರ್ ಹಾಗೂ ಲೋಗೋವನ್ನು ಅನಾವರಣಗೊಳಿಸಿದರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಮಂಜಮ್ಮ ಜೋಗತಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಓದಿ:ಮಳೆ ನಿಂತ ಮೇಲೆ ಶುರುವಾಯ್ತು ಅನಾರೋಗ್ಯ ಸಮಸ್ಯೆ: ವೈರಲ್ ಫೀವರ್ಗೆ ಮಕ್ಕಳೇ ಟಾರ್ಗೆಟ್