ಬೆಂಗಳೂರು:'ಪರ್ವ' ನಾಟಕದ ಪ್ರದರ್ಶನವನ್ನ ರಂಗಾಯಣ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಪರ್ವ ನಾಟಕದ ಮೂಲಕ ನಾವು ಹಿರಿಯ ಸಾಹಿತಿಗೂ ಗೌರವ ನೀಡಿದಂತಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಮೈಸೂರಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಖ್ಯಾತ ಕಾದಂಬರಿಕಾರ ಡಾ. ಎಸ್‌ಎಲ್ ಭೈರಪ್ಪರ ‘ಪರ್ವ’ ಕಾದಂಬರಿ ಆಧಾರಿತ ನಾಟಕ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿ ಎರಡನೆಯ ದಿನದ ಪ್ರದರ್ಶನ ಕಾಣುತ್ತಿದೆ. 66ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ 'ಕನ್ನಡಕ್ಕಾಗಿ ನಾವು' ವಿಶೇಷ ಅಭಿಯಾನದ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಪರ್ವ ನಾಟಕಕ್ಕೆ, ಸಚಿವ ಸುನಿಲ್ ಕುಮಾರ್ ಚಾಲನೆ ನೀಡಿ ನಾಟಕ ವೀಕ್ಷಿಸಿದ್ರು.ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಉಪಸ್ಥಿತರಿದ್ದರು.
ನಂತರ ಮಾತನಾಡಿದ ಸಚಿವರು, ಕೊರೊನಾ ಬಳಿಕ ಮೊದಲ ಸುದೀರ್ಘ ನಾಟಕ ಪರ್ವ ಪ್ರದರ್ಶನಕ್ಕೆ 50 ಲಕ್ಷ ಬಿಡುಗಡೆಗೆ ಮಾಡಲಾಗಿದೆ. ರಂಗಾಯಣ ರಾಜ್ಯವಷ್ಟೇ ಅಲ್ಲ, ದೇಶದಲ್ಲೂ ಹೆಸರುವಾಸಿಯಾಗಿದ ಎಂದರು.
ಕಾರ್ಯಕ್ರಮದ ನಂತರ ಸುನಿಲ್ ಕುಮಾರ್ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ʻಕನ್ನಡಕ್ಕಾಗಿ ನಾವುʼ ಅಭಿಯಾನದ ಹಿನ್ನೆಲೆಯಲ್ಲಿ ತಯಾರಿಸಲಾದ ಭಿತ್ತಿ ಪತ್ರಗಳ ಮತ್ತು ವಿಡಿಯೋಗಳ ಅನಾವರಣ ಹಾಗೂ ಅಭಿಯಾನದ ವಿವಿಧ ವಿಡಿಯೋ ಪ್ರದರ್ಶನದ ಎಲ್.ಇ.ಡಿ ಪರದೆ ಹೊಂದಿರುವ ವಾಹನ ಅನಾವರಣ ಮಾಡಿದರು.
8 ಗಂಟೆ ಅವಧಿಯ ನಾಟಕ:
ನಾಲ್ಕು ವಿರಾಮಗಳನ್ನು ಒಳಗೊಂಡಿರುವ ಸುಮಾರು 8 ಗಂಟೆ ಅವಧಿಯ ಈ ನಾಟಕವನ್ನು ಖ್ಯಾತ ರಂಗನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ರಂಗರೂಪಕ್ಕಿಳಿಸಿ ನಿರ್ದೇಶನ ಮಾಡಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.