ಬೆಂಗಳೂರು :ಪಡಿತರ ಚೀಟಿ ಇರುವ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡುವುದನ್ನೂ ಒಳಗೊಂಡಂತೆ ಆಯ-ವ್ಯಯದಲ್ಲಿ ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.
ಕಾವೇರಿ ಭವನದಲ್ಲಿರುವ ಕೆಪಿಟಿಸಿಎಲ್ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಇಂದು ಬೆಳಗ್ಗೆಯಿಂದ ಇಂಧನ ಇಲಾಖೆ, ವಿದ್ಯುತ್ ಸರಬರಾಜು ಕಂಪನಿಗಳು ಮತ್ತು ಅದರ ಅಂಗ ಸಂಸ್ಥೆಗಳ ಕಾರ್ಯ ನಿರ್ವಹಣೆಯ ಪರಾಮರ್ಶೆ ಸಭೆ ನಡೆಸಿ ಮಾತನಾಡಿದರು.
ಬಜೆಟ್ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಮತ್ತು ಕೇಂದ್ರ ಸರ್ಕಾರದ ಸಹಯೋಗದ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಇದರಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಟ್ರಾನ್ಸ್ಫಾರ್ಮ್ಗಳ ದುರಸ್ಥಿ, ಬದಲಾವಣೆ ಕುರಿತಂತೆ ಬಹಳಷ್ಟು ದೂರುಗಳು ಬರುತ್ತವೆ. ಅವುಗಳ ಬಗ್ಗೆ ತಕ್ಷಣವೇ ಕ್ರಮಕೈಗೊಳ್ಳಬೇಕು. ಅವುಗಳನ್ನು ಬದಲಾವಣೆ ಮಾಡಲು ವಿಳಂಬ ಮಾಡಬಾರದು. ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಸಲ್ಲಿಕೆಯಾಗಬೇಕಾಗಿರುವ ಪ್ರಸ್ತಾವನೆಗಳನ್ನೂ ಸಹ ಯಾವುದೇ ವಿಳಂಬ ಮಾಡದೇ ನಿಗದಿತ ಕಾಲಾವಧಿಯೊಳಗೆ ಸಲ್ಲಿಸಲು ಕ್ರಮಕೈಗೊಳ್ಳಬೇಕೆಂದು ಅವರು ಸೂಚಿಸಿದರು.
ನಷ್ಟ ತಡೆಯಲು ಕಾರ್ಯಯೋಜನೆ : ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡುವ ಕೆಲಸವೂ ಸಹ ಕಾಲಮಿತಿಯೊಳಗೆ ಮತ್ತು ಪರಿಣಾಮಕಾರಿಯಾಗಿ ಆಗಬೇಕು. ಅನಧಿಕೃತ ಸಂಪರ್ಕ, ವಿದ್ಯುತ್ ಸೋರಿಕೆ, ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಳಂಬ, ಮೀಟರ್ಗಳ ಅಳವಡಿಕೆಯಲ್ಲಿ ಆಗುವ ವಿಳಂಬ ಇತ್ಯಾದಿ ಕಾರಣಗಳಿಂದ ಇಂಧನ ಸರಬರಾಜು ಕಂಪನಿಗಳಿಗಾಗುವ ನಷ್ಟ ತಡೆಯಲು ಕಾರ್ಯಯೋಜನೆ ರೂಪಿಸಬೇಕು. ಅದನ್ನು ಅನುಷ್ಠಾನಗೊಳಿಸಲು ಎಲ್ಲಾ ವಿಧವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.