ಬೆಂಗಳೂರು: ಕೊರೊನಾ ಮಹಾಮಾರಿಯ ಈ ಸಂಕಷ್ಟದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹಣ ಸುಲಿಗೆಗೆ ನಿಂತಿವೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಇದಕ್ಕೆ ಪುಷ್ಟಿ ನೀಡುವಂತೆ ನಗರದ ಖಾಸಗಿ ಆಸ್ಪತ್ರೆಯೊಂದು ನೀಡಿರುವ ಬಿಲ್ ಸ್ವತಃ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರ ಗಮನಕ್ಕೆ ಬಂದಿದೆ.
ಹೌದು.., ರೋಗಿಗಳ ರಕ್ತಹೀರಿಯಾದರೂ ಹಣ ವಸೂಲಿ ಮಾಡುವ ಕಾರ್ಯಕ್ಕೆ ಮುಂದಾಗಿರುವ ಕೆಲ ಖಾಸಗಿ ಆಸ್ಪತ್ರೆಗಳ ವೈಖರಿ ನೋಡಿ ಸ್ವತಃ ಸಚಿವರೇ ದಂಗಾಗಿ ಹೋಗಿದ್ದಾರೆ. ಆರೋಗ್ಯ ಇಲಾಖೆಯ, ಸಚಿವರ ಆದೇಶಕ್ಕೂ ಡೋಂಟ್ ಕೇರ್ ಎನ್ನುತ್ತಿವೆ ಖಾಸಗಿ ಆಸ್ಪತ್ರೆಗಳು.
ಈ ಬಗ್ಗೆ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಹೆಚ್ಚು ತೊಂದರೆಯಾಗ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಅನೇಕ ಬಾರಿ ಆ ಆಸ್ಪತ್ರೆಗೆ ವಾರ್ನ್ ಮಾಡಿದ್ದೇನೆ. ಆದರೂ ಇಂದು ಕೊರೊನಾ ರೋಗಿಗೆ 5 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಆಘಾತವಾಯಿತು ಅಂತ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆ ನೀಡಿರುವ ಬಿಲ್ ಒಟ್ಟಾರೆ, ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯ ಉದ್ಧಟತನ ನಿಲ್ಲುವ ಹಾಗೇ ಕಾಣ್ತಿಲ್ಲ. ಕೊರೊನಾ ಟ್ರೀಟ್‌ಮೆಂಟ್ ಹೆಸರಲ್ಲಿ ಲಕ್ಷ ಲಕ್ಷ ಹಣ ಪೀಕುತ್ತಿದೆ. ಕೊರೊನಾ ಪಾಸಿಟಿವ್ ಬಂದಿರುವ ರೋಗಿಗೆ ಬರೋಬ್ಬರಿ ಐದು ಲಕ್ಷ ರೂಪಾಯಿ ಬಿಲ್ ಹಾಕಿದೆ. ಇತ್ತ ಆಸ್ಪತ್ರೆಯ ಬಿಲ್ ಕಂಡು ಕೊರೊನಾ ರೋಗಿಗೂ ಶಾಕ್ ಆಗಿದೆ.
ಖಾಸಗಿ ಆಸ್ಪತ್ರೆ ಬಿಲ್ ಕುರಿತು ಸಚಿವರ ಟ್ವೀಟ್ ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರುತ್ತಿರುವ ಆಸ್ಪತ್ರೆ ಆಡಳಿತ ಮಂಡಳಿಯು ನಿಗದಿ ಮಾಡಿರುವ ದರಕ್ಕಿಂತಲೂ ಹೆಚ್ಚು ಹಣ ಲೂಟಿ ಮಾಡುತ್ತಿದೆ. ಆಸ್ಪತ್ರೆಯ ಹಣದ ಲೂಟಿಗೆ ಬೇಸತ್ತ ರೋಗಿಗಳು ಹಾಗೂ ಕುಟುಂಬಸ್ಥರು, ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ನಾಲ್ಕು ಲಕ್ಷ ಬಿಲ್ ಕಟ್ಟಿಸಿಕೊಂಡಿರೋ ಆಸ್ಪತ್ರೆ ಸಿಬ್ಬಂದಿ, ಇನ್ನುಳಿದ 1 ಲಕ್ಷ ಹಣವನ್ನು ಕಟ್ಟುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.