ಬೆಂಗಳೂರು:ವಿಕ್ಟೋರಿಯಾ ಆಸ್ಪತ್ರೆಗೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಭೇಟಿ ನೀಡಿದರು. ಕಳೆದೆರಡು ದಿನಗಳಿಂದ ವಿಕ್ಟೋರಿಯಾದಲ್ಲಿ ವೈದ್ಯರಿಗೆ ನೀಡುವ ಪಿಪಿಇ ಕಿಟ್ಗಳ ಗುಣಮಟ್ಟ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಇಂದು ಖುದ್ದು ಭೇಟಿ ನೀಡಿ, ಪಿಪಿಇ ಕಿಟ್ಗಳ ಗುಣಮಟ್ಟವನ್ನ ಪರಿಶೀಲಿಸಿದರು. ಸ್ವತಃ ತಾವೇ ಬಳಸಿ ಕೂಡ ನೋಡಿ, ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಆಸ್ಪತ್ರೆಯಲ್ಲಿರುವ ಎಲ್ಲಾ ನಮೂನೆಯ ಕಿಟ್ ಪರಿಶೀಲನೆ ನಡೆಸಿದರು.
ನಂತರ ಮಾತಾನಾಡಿದ ಅವರು, ಕಳೆದ ನಾಲ್ಕು ದಿನಗಳಿಂದ ನಾನು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಈ ವೇಳೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ನರ್ಸ್ಗಳು ಪಿಪಿಇ ಕಿಟ್ ಗುಣಮಟ್ಟ ಸರಿ ಇಲ್ಲವೆಂದು ಪ್ರತಿಭಟನೆ ನಡೆಸಿದ್ದಾರೆ. ಪಿಪಿಇ ಕಿಟ್ ಕುರಿತು ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿಯೇ ಖುದ್ದು ಪರಿಶೀಲನೆ ನಡೆಸಿದ್ದೇನೆ. ಯಾರು ಆರೋಪ ಮಾಡಿದ್ದರೊ ಅದು ಸುಳ್ಳಾಗಿದೆ. ಕೆಲ ನರ್ಸ್ಗಳು ಕಳಪೆ ಪಿಪಿಇ ಕಿಟ್ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಎಫ್ಡಿಎ ಮತ್ತು ಸಿಟ್ರಾ ಸರ್ಟಿಫಿಕೆಟ್ ಇರೋ ಪಿಪಿಇ ಕಿಟ್ ಇಲ್ಲಿ ಇಡಲಾಗಿದೆ. ಆರೋಪ ಸತ್ಯಕ್ಕೆ ದೂರವಾದದ್ದು. ಕೆಲಸ ಮಾಡಲು ಮನಸ್ಸಿಲ್ಲದವರು ಸುಖಾಸುಮ್ನೆ ಆರೋಪ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೊರಟ್ಟಿದ್ದಾರೆ ಅಂತ ಹೇಳಿದರು.
95 ಜಿಎಸ್ಎಂ ಹೋಗದ ರೀತಿ ಕಿಟ್ ಇರಬೇಕು, ಅದು ಇದೆ. ನಾವು, ಕೊರೊನಾ ವಾರಿಯರ್ಸ್ ತುಂಬಾ ಕಷ್ಟದಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಬೇಡಿ ಅಂತ ಹೇಳಿದರು.