ಬೆಂಗಳೂರು :ನಗರದ ಹೊರಮಾವು ಕ್ರಿಶ್ಚಿಯನ್ ನರ್ಸಿಂಗ್ ಕಾಲೇಜಿನಲ್ಲಿ 34 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಧೃಢಪಟ್ಟ ಹಿನ್ನೆಲೆ ಇಂದು ಆರೋಗ್ಯ ಸಚಿವ ಡಾ. ಸುಧಾಕರ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷಾ ವರದಿ ಪರಿಶೀಲಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಕಾಲೇಜು ಆಡಳಿತ ಮಂಡಳಿಗೆ ತಿಳಿಸಿದರು.
ಪರಿಶೀಲನೆ ನಂತರ ಮಾತನಾಡಿದ ಸಚಿವರು, ಕಾಲೇಜು ಆರಂಭವಾದ ಕಾರಣ ಕೇರಳದಿಂದ ಬಂದಿರುವ 34 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಎಲ್ಲಾ ವಿದ್ಯಾರ್ಥಿಗಳನ್ನ ಜಿಂಕ್ ಹೋಟೆಲ್ ಹಾಗೂ ಹೆಚ್ಎಎಲ್ ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗಿದೆ.
ಕಾಲೇಜಿನಲ್ಲಿ 600 ವಿದ್ಯಾರ್ಥಿಗಳಿಗೆ ಕೋವಿಡ್ ಮೊದಲ ಲಸಿಕೆ ಹಾಕಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಆದರೂ ಪರಿಶೀಲನೆ ನಡೆಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಕ್ರಿಶ್ಚಿಯನ್ ನರ್ಸಿಂಗ್ ಕಾಲೇಜಿಗೆ ಭೇಟಿ ನೀಡಿದ ಸಚಿವ ಸುಧಾಕರ್ ಸೋಂಕಿತ ವಿದ್ಯಾರ್ಥಿಗಳ ಸಂಪರ್ಕಿತರನ್ನು ಪತ್ತೆ ಹಚ್ಚಿ ಟೆಸ್ಟ್ ಮಾಡಿ ರಿಪೋರ್ಟ್ ನೀಡಲು ಸೂಚಿಸಲಾಗಿದೆ. ಅಲ್ಲಿವರೆಗೆ ಕಂಟೇನ್ಮೆಂಟ್ ಝೋನ್ ಆಗಿ ಮಾಡಲು ನಿರ್ದೇಶನ ನೀಡಲಾಗಿದೆ ಎಂದರು.
ಫೇಕ್ ಸರ್ಟಿಫಿಕೇಟ್ ಕಂಡು ಬಂದಿರುವುದು ನಿಜ : ಹೊರ ರಾಜ್ಯದ ಕೊರೊನಾ ರಿಪೋರ್ಟ್ ಎಲ್ಲವೂ ಸರಿ ಅಂತಾ ಹೇಳಲು ಸಾಧ್ಯವಿಲ್ಲ. ಹಾಗೆಯೇ, ನೆಗೆಟಿವ್ ರಿಪೋರ್ಟ್ ಎಲ್ಲಾ ಫೇಕ್ ಅಂತಾ ಹೇಳೋಕು ಆಗಲ್ಲ. ಕೆಲವರು ನಕಲಿ ವರದಿ ತಂದಿದ್ದಾರೆ. ಈ ಕುರಿತು ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಮೂವರಿಂದ 34 ವಿದ್ಯಾರ್ಥಿಗಳಿಗೆ ಕೋವಿಡ್ :ಸೋಂಕಿತ 34 ವಿದ್ಯಾರ್ಥಿಗಳ ಪೈಕಿ 12 ಹುಡುಗರು ಮತ್ತು 22 ಹುಡುಗಿಯರಿದ್ದಾರೆ. ಇತ್ತೀಚೆಗೆ ಕಾಲೇಜಿನಲ್ಲಿ ಗೆಟ್ ಟು ಗೆದರ್ ಪಾರ್ಟಿ ಆಯೋಜನೆ ಮಾಡಿದ್ದರು. ಈ ವೇಳೆ ಅನೇಕ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡಿದ್ದರು.
ಮೊದಲು ಮೂರು ವಿದ್ಯಾರ್ಥಿಗಳಿಗೆ ಸಿಂಪ್ಟಮ್ಸ್ ಕಾಣಿಸಿತ್ತು. ಬಳಿಕ ಮೂವರನ್ನು CCCಗೆ ವೈದ್ಯರು ಶಿಫ್ಟ್ ಮಾಡಿದ್ದಾರೆ. ನಂತರ ಇನ್ನುಳಿದ ಎಲ್ಲಾ 31 ವಿದ್ಯಾರ್ಥಿಗಳಿಗೆ ಪಾಸಿಟಿವ್ ರಿಪೋರ್ಟ್ ಬಂದಿತ್ತು. ಬಿಬಿಎಂಪಿ ಎಲ್ಲರನ್ನೂ CCCಗೆ ವರ್ಗಾಯಿಸಿದ್ದಾರೆ. ಸದ್ಯ ವೈದ್ಯರು ಕಾಲೇಜಿನ 412 ವಿದ್ಯಾರ್ಥಿಗಳನ್ನು RTPCR ಟೆಸ್ಟ್‌ಗೆ ಒಳಪಡಿಸಿದ್ದಾರೆ.
ಈ ಬಗ್ಗೆ ಬಿಬಿಎಂಪಿ ಚೀಫ್ ಕಮಿಷನರ್ ಗೌರವ್ ಗುಪ್ತ ಹೇಳಿಕೆ ನೀಡಿದ್ದು, ಇಂದು ಒಂದೇ ಕಾಲೇಜಿನಲ್ಲಿ 34 ಜನ ಪಾಸಿಟಿವ್ ಆಗಿದೆ. ಕ್ಲಸ್ಟರ್ ಮಟ್ಟದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಆ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗಿದೆ. ಈಗಾಗಲೇ ನಮ್ಮ ಅಧಿಕಾರಿಗಳು ಆ ಪ್ರದೇಶವನ್ನು ಸೀಲ್‌ಡೌನ್ ಮಾಡಿದ್ದಾರೆ ಎಂದು ಹೇಳಿದ್ದಾರೆ.