ಬೆಂಗಳೂರು: ಬಹಳ ಅವಶ್ಯಕತೆ, ಅನಿವಾರ್ಯ ಇರುವುದರಿಂದ ನೈಟ್ ಕರ್ಫ್ಯೂ ನಿರ್ಣಯವನ್ನು ಜನರ ಸುರಕ್ಷತೆ ದೃಷ್ಟಿಯಿಂದ ಕೈಗೊಳ್ಳಲಾಗಿದ್ದು, ವರ್ತಕರಿಗೆ ನಷ್ಟವಾದರೂ ಜನರ ಆರೋಗ್ಯದ ದೃಷ್ಟಿಯಿಂದ ಸಹಕಾರ ನೀಡಬೇಕು. ಅವರೂ ಕೂಡ ತಮ್ಮ ಸಾಮಾಜಿಕ ಕಳಕಳಿ, ಜವಾಬ್ದಾರಿ ನಿರ್ವಹಿಸಬೇಕು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಕೆಲವರಿಗೆ ತೊಂದರೆ ಆಗಲಿದೆ ಎನ್ನುವುದನ್ನು ತಕ್ಕಮಟ್ಟಿಗೆ ಒಪ್ಪಿಕೊಳ್ಳುತ್ತೇವೆ. ಆದರೆ ನಾವು ಸಂಜೆ 7 ಗಂಟೆಯಿಂದ ಕರ್ಫ್ಯೂ ಜಾರಿ ಮಾಡಿಲ್ಲ. ರಾತ್ರಿ 10 ಗಂಟೆಯಿಂದ ಮಾಡಿದ್ದೇವೆ. ಎಲ್ಲರೂ ಅಷ್ಟರಲ್ಲಿ ಮನೆ ಸೇರಿಕೊಳ್ಳಬಹುದು. ವರ್ತಕರಿಗೆ ನಷ್ಟವಾಗಬಹುದು. ಆದರೂ ಅವರಿಗೂ ಸಾಮಾಜಿಕ ಜವಾಬ್ದಾರಿ ಇರಬೇಕು.
ಕೇವಲ ಸಂಪಾದನೆ, ಆರ್ಥಿಕ ಚಟುವಟಿಕೆಯನ್ನು ಮಾತ್ರ ನೋಡಿದರೆ ಜನರ ಸುರಕ್ಷತೆ, ಅವರ ಆರೋಗ್ಯವನ್ನು ಯಾರು ನೋಡುತ್ತಾರೆ. ಹಾಗಾಗಿ ಅವರು ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕೇವಲ 9 ದಿನ ಮಾತ್ರ ಕರ್ಫ್ಯೂ ಜಾರಿ ಮಾಡುವುದಾಗಿ ಹೇಳಿದ್ದೇವೆ. 9 ದಿನಗಳಲ್ಲಿ ನಾವು ರೂಪಾಂತರ ವೈರಾಣು ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎನ್ನುವುದನ್ನು ಅಧ್ಯಯನ ಮಾಡಲು ಸಹಾಯವಾಗಲಿದೆ. ಇದಕ್ಕೆ ಸಹಕಾರ ನೀಡಬೇಕು ಎಂದರು.