ಬೆಂಗಳೂರು: ರಾಜ್ಯದಲ್ಲಿ ಔಷಧಿ, ಲಸಿಕೆ ಕೊರತೆ ಇಲ್ಲ. ಕೊರತೆ ಆಗದಂತೆ ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ. ಅದೇ ರೀತಿ ಲಾಕ್ಡೌನ್ ಮಾಡದೆ ಉಳಿದ ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮ್ಡೆಸಿವರ್ ಸೇರಿದಂತೆ ಔಷಧಿ, ಲಸಿಕೆ ಯಾವುದು ರಾಜ್ಯದಲ್ಲಿ ಕೊರತೆ ಇಲ್ಲ.
ರಮ್ಡೆಸಿವರ್ ಉತ್ಪಾದನೆ ಕಂಪನಿಗಳು ನಮ್ಮ ರಾಜ್ಯದಲ್ಲಿ ಇವೆ. ಹೀಗಾಗಿ ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತೇವೆ. ಅಗತ್ಯತೆಗೆ ಅನುಗುಣವಾಗಿ ಔಷಧಿ, ಚಿಕಿತ್ಸೆ ನೀಡುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತದೆ ಎಂದರು. ಭಾನುವಾರ ಸಂಜೆ 4 ಗಂಟೆಗೆ ಸಿಎಂ ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಆ ಸಭೆಯಲ್ಲಿ ಎಲ್ಲಾ ಪಕ್ಷಗಳ ಸಲಹೆ ಪಡೆಯುತ್ತೇವೆ. ಸರ್ಕಾರ ಒಂದೇ ಈ ಕೆಲಸ ಮಾಡೋದಲ್ಲ. ಎಲ್ಲರೂ ಈ ಕೆಲಸಕ್ಕೆ ಕೈ ಜೋಡಿಸಬೇಕು. ಹೀಗಾಗಿ ಪ್ರತಿಪಕ್ಷಗಳ ಸಭೆ ಕರೆಯಲಾಗಿದೆ. ರಾಜ್ಯದಲ್ಲಿ ಲಾಕ್ಡೌನ್ ಇಲ್ಲ. ಲಾಕ್ಡೌನ್ ಹೊರತುಪಡಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ನಮಲ್ಲಿ ಪಾಸಿಟಿವ್ ರೇಟ್ ಕಡಿಮೆ ಇದೆ. ಮದುವೆ ಸೇರಿದಂತೆ ಜನ ಸೇರುವ ಸಮಾರಂಭಗಳಿಗೆ ಕಡಿವಾಣ ಹಾಕಬೇಕು. ಜನರೇ ಸ್ವಯಂ ಆಗಿ ನಿರ್ಬಂಧ ಹಾಕಿಕೊಳ್ಳಬೇಕು. ಜನರೇ ಜನತಾ ಕರ್ಫ್ಯೂಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ನೈಟ್ ಕರ್ಫ್ಯೂ ಸಮಯ ಬದಲಾವಣೆ ಮಾಡುವ ವಿಚಾರ ಕುರಿತು ಸಿಎಂ ಜೊತೆ ಚರ್ಚೆ ಮಾಡಿ ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೇವೆ. ಐಸಿಯು ಬೆಡ್ ಎಲ್ಲಾ ಖಾಲಿ ಆಗಿದೆ ಅಂತ ಹೇಳಲು ಸಾಧ್ಯವಿಲ್ಲ. ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಜನ ಅಡ್ಮಿಟ್ ಆಗುತ್ತಿರುವುದರಿಂದ ಅಲ್ಲಿ ಭರ್ತಿ ಆಗಿದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ನಮಗೆ ಐಸಿಯು ಬೆಡ್ ಖಾಲಿ ಇವೆ. ಇದರ ಅಂಕಿ-ಅಂಶ ಕೊಡುವ ಕೆಲಸ ಮಾಡುತ್ತೇವೆ. ಜನರಿಗೆ ಮತ್ತಷ್ಟು ತಿಳುವಳಿಕೆ ಹೇಳುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಮನವಿ ಮಾಡಿದರು.
ಮಹಾರಾಷ್ಟ್ರ ಮಾದರಿ ಟಫ್ ರೂಲ್ಸ್ ಜಾರಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಸುಧಾಕರ್, ನಿನ್ನೆ ಸಿಎಂ ಯಡಿಯೂರಪ್ಪ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡಿದ್ದಾರೆ.
ರಾಜ್ಯದಲ್ಲಿ ಸೋಂಕು ಹೆಚ್ಚಳ ಆಗುತ್ತಿದೆ. ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣ ಕಳೆದ ವರ್ಷದಷ್ಟೇ ಆಗುತ್ತಿದೆ. ಈ ನಿಟ್ಟಿನಲ್ಲಿ ಸಿಎಂ ಸಭೆ ಮಾಡಿದ್ದಾರೆ. ಲಾಕ್ಡೌನ್ ಹೊರತುಪಡಿಸಿ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು. ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚೆ ಆಗಿದೆ.
ಸಿಎಂ ಎರಡು ದಿನ ಬೆಳಗಾವಿ ಪ್ರವಾಸದಲ್ಲಿದ್ದಾರೆ. ಪ್ರವಾಸ ಮುಗಿಸಿ ವಾಪಸ್ ಬಂದ ಬಳಿಕ ಕಠಿಣ ನಿಯಮಗಳ ಕುರಿತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.