ಬೆಂಗಳೂರು:ಕೊರೊನಾ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ಕಾರಣಕ್ಕೆ ಹೋಂ ಕ್ವಾರಂಟೈನ್‌ನಲ್ಲಿ ಇರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಇಂತಹ ಸನ್ನಿವೇಶ ಎದುರಾಗುವ ಸುಳಿವು ಮೊದಲೇ ಇತ್ತು. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಔಷಧಿ ಪಡೆಯುವ ಕೋರ್ಸ್ ಆರಂಭಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಹೌದು, ಕೋವಿಡ್-19 ವಾರ್ ಫೀಲ್ಡ್ ಗೆ ಇಳಿಯುವ ಮೊದಲೇ ಕೊರೊನಾದಿಂದ ರಕ್ಷಣೆ ಪಡೆಯುವ ಔಷಧೋಪಚಾರವನ್ನು ಡಾ.ಸುಧಾಕರ್ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದು, ಕೊರೊನಾ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿವುದು, ಅಧಿಕಾರಿಗಳ ಜೊತೆ ಸಭೆ ನಡೆಸುವುದು ಸೇರಿದಂತೆ ಕೊರೊನಾ ವಿರುದ್ಧದ ಕಾರ್ಯಾಚರಣೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತೊಡಗಿಕೊಂಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಜಿಲ್ಲೆಗಳ ಪ್ರವಾಸವನ್ನೂ ಮಾಡುವ ಕಾರಣಕ್ಕೆ ಹಾಗು ಕೊರೊನಾ ಸೋಂಕಿತ ಸ್ಥಳಗಳ ಸಮೀಪದಲ್ಲಿಯೂ ಇರಬೇಕಾದ ಹಿನ್ನೆಲೆಯಲ್ಲಿ ಸೋಂಕು ತಗುಲದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಸಿಕ್ಯೂ ಡೋಸೇಜ್ ಕೋರ್ಸ್ ತೆಗೆದುಕೊಳ್ಳಲು ಶುರುಮಾಡಿದ್ದಾರೆ.
ಏಳು ವಾರಗಳ ಕಾಲ ಈ ಕೋರ್ಸ್ ತೆಗೆದುಕೊಳ್ಳಲಾಗುತ್ತದೆ. ಮೊದಲ ದಿನ 400 ಎಂಜಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಬೆಳಗ್ಗೆ ಮತ್ತು ಸಂಜೆ ಒಂದೊಂದು ತೆಗೆದುಕೊಳ್ಳಲಿದ್ದು ನಂತರ ಪ್ರತಿ ವಾರ ಒಂದು ಮಾತ್ರೆಯನ್ನು ಏಳು ವಾರಗಳ ಕಾಲ ತೆಗೆದುಕೊಳ್ಳಲಾಗುತ್ತದೆ. ಈ ಕೋರ್ಸ್ ಕೊರೊನಾ ವಾರಿಯರ್ಸ್‌ಗೆ ಮುಂಜಾಗ್ರತಾ ಕ್ರಮವಾಗಿ ನೀಡುತ್ತಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೂಡ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಆಸ್ಪತ್ರೆಗಳು, ಪ್ರಯೋಗಾಲಗಳ ಭೇಟಿ ಜೊತೆ ಪದೇ ಪದೇ ಮಾಧ್ಯಮಗಳಿಗೆ ಹೇಳಿಕೆಗಳನ್ನು ಕೊಡಬೇಕಿದ್ದ ಹಿನ್ನೆಲೆಯಲ್ಲಿ ಯಾವ ಕ್ಷಣದಲ್ಲಾದ್ರೂ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಇಲ್ಲವೇ ದ್ವಿತೀಯ ಸಂಪರ್ಕದ ಸಾಧ್ಯತೆ ಹೆಚ್ಚಾಗಿದ್ದ ಕಾರಣಕ್ಕೆ ಸೋಂಕಿಗೆ ಸುಲಭವಾಗಿ ಸಿಲುಕಬಾರದು ಎಂದು ಔಷಧೋಪಚಾರವನ್ನು ಪಡೆದುಕೊಳ್ಳುತ್ತಿದ್ದಾರೆ.
ಇದೀಗ ಸಚಿವರು ಅನಿರೀಕ್ಷಿತವಾಗಿ ಸೋಂಕಿತ ವ್ಯಕ್ತಿಯ ಸಂಪರ್ಕಿತ ಪಟ್ಟಿಯಲ್ಲಿ ಸೇರಿದ್ದಾರೆ. ಅದು ಕೂಡ ಕ್ಯಾಮೆರಾ ಮನ್ ಒಬ್ಬರ ಪ್ರಾಥಮಿಕ ಸಂಪರ್ಕಿತ ಆದ ಕಾರಣ ಹೋಂ ಕ್ವಾರಂಟೈನ್ ನಲ್ಲಿ ಇದ್ದು ಅಲ್ಲಿಯೂ ಹೈಡ್ರಾಕ್ಸಿಕ್ಲೋರೋಕ್ವಿನ್ ಕೋರ್ಸ್ ಮುಂದುವರೆಸಿದ್ದಾರೆ.