ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ನಮ್ಮ ರಾಜ್ಯ ಸರ್ಕಾರವು ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದೆ. ಇನ್ನೂ ಒಂದು ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ. ಸರ್ಕಾರ ಈ ರೀತಿ ನೌಕರರಿಗೆ ಸ್ಪಂದಿಸಿರುವುದನ್ನು ಗಮನಿಸಿ ಮುಷ್ಕರ ಕೈ ಬಿಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೌಕರರಿಗೆ ಮನವಿ ಮಾಡಿದ್ದಾರೆ.
ಸಾರಿಗೆ ಸಂಸ್ಥೆಯ ನೌಕರರು ಶ್ರಮಜೀವಿಗಳಾಗಿದ್ದು, ಸಾರ್ವಜನಿಕ ಸೇವೆಗಾಗಿ ಬಹಳ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಹಾಗೂ ನೌಕರರ ಪರಸ್ಪರ ಕೊಡು ಕೊಳ್ಳುವಿಕೆಗಳಿಂದಾಗಿ ರಾಜ್ಯದ ಜನತೆಗೆ ಉತ್ತಮ ರಸ್ತೆ ಸಾರಿಗೆ ಸೇವೆ ಒದಗಿಸಲಾಗುತ್ತಿದೆ. ಕಾಲಕಾಲಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಕೋವಿಡ್ನಿಂದಾಗಿ ಆರ್ಥಿಕ ಸಂಕಷ್ಟವಾದಾಗಲೂ ನೌಕರರ ಬದುಕು, ಅವರ ಕುಟುಂಬದ ಹಿತಕ್ಕಾಗಿ ಒಟ್ಟು 1,953.45 ಕೋಟಿ ರೂ. ನಷ್ಟು ವೇತನವನ್ನು ಪಾವತಿಸಲಾಗಿದೆ. ವೇತನ ಬಾಕಿ ಇಟ್ಟುಕೊಂಡು ನೌಕರರು ಸಂಕಷ್ಟಕ್ಕೆ ಸಿಲುಕಿಸುವಂತಹ ಯಾವುದೇ ಕೆಲಸವನ್ನು ಸರ್ಕಾರ ಮಾಡಿಲ್ಲ. ನಾಗರಿಕ ಸ್ನೇಹಿ ಆಡಳಿತಕ್ಕೆ ಸಹಕರಿಸಬೇಕು ಎಂದು ಸಚಿವರು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.