ಬೆಂಗಳೂರು:ಕೊರೊನಾ ಎರಡನೇ ಅಲೆ ಎಚ್ಚರಿಕೆಯನ್ನು ಜನ ಗಂಭೀರವಾಗಿ ಪರಿಗಣಿಸಿಲ್ಲ. ಜನನಿಬಿಡದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ನಿನ್ನೆ ಒಂದೇ ದಿನ 34 ಸಾವಿರ ಜನರು ಲಸಿಕೆ ಪಡೆದಿದ್ದಾರೆ. ಇಲ್ಲಿಯವರೆಗೂ 41 ಲಕ್ಷ ಜನ ಲಸಿಕೆ ಪಡೆದಿದ್ದಾರೆ. ಇನ್ನು ಹೆಚ್ಚಿನ ಜನರು ಬಂದು ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.
ಅತಿ ಹೆಚ್ಚು ಜನ ಒಂದೆಡೆ ಸೇರುವುದು, ಮಾಸ್ಕ್ ಧರಿಸದಿರುವುದು ನಮಗೆ ಹತಾಶೆ ತರಿಸಿದೆ. ಸಿನಿಮಾ ಮಂದಿರ, ಮಾರ್ಕೆಟ್ ಬಳಿ ಅನಗತ್ಯವಾಗಿ ಜನರು ಸೇರುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲಿಸುತ್ತಿಲ್ಲ. ಸೋಂಕಿನ ಪ್ರಮಾಣ ಹೆಚ್ಚಾದರೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪಿಎಂ ಕಾರ್ಯದರ್ಶಿ ಜೊತೆ ಸಿಎಂ ಸಭೆ ನಡೆಸುತ್ತಿದ್ದಾರೆ. ವಿಡಿಯೋ ಸಂವಾದದ ಮೂಲಕ ಸಭೆ ನಡೆಯುತ್ತಿದೆ. ಸಂಜೆ ವೇಳೆಗೆ ಹೊಸ ಮಾರ್ಗಸೂಚಿ ಹೊರಬರಲಿದೆ ಎಂದರು.