ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಕರ್ತವ್ಯ ಕಾಲದ ಅಭಿವೃದ್ಧಿಯ ಅಮೃತವನ್ನು ಎಲ್ಲಾ ವರ್ಗಗಳ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ಯಶಸ್ವಿಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ಮೂಲಕ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಏಷ್ಯಾದಲ್ಲಿಯೇ ಅತಿ ದೊಡ್ಡ 2ನೇ ರೇಷ್ಮೆ ಮಾರುಕಟ್ಟೆಯನ್ನು ಶಿಡ್ಲಘಟ್ಟ ಹೊಂದಿದೆ. ಇಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಿಸಲಾಗುತ್ತದೆ. ಇದು ಕೋಲಾರ, ಚಿಕ್ಕಬಳ್ಳಾಪುರ ಭಾಗದ ರೇಷ್ಮೆ ಬೆಳೆಗಾರರಿಗೆ ಸಂಭ್ರಮ ತಂದಿದೆ. 32 ರೀಲಿಂಗ್ ಘಟಕಗಳ ಸ್ಥಾಪನೆಗೆ 10 ಕೋಟಿ ರೂ, ಶ್ರೆಡ್ಡರ್ಸ್‌ಗಳಿಗಾಗಿ 12 ಕೋಟಿ ರೂ, ಹೀಗೆ ಮೊದಲಾದ ನೆರವು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ರೇಷ್ಮೆ ಬೆಳೆಗಾರರ ಬದುಕಿಗೆ ಸುಧಾರಣೆಯ ಹೊಸ ನೋಟ ನೀಡಿದ ಮುಖ್ಯಮಂತ್ರಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ. ದ್ರಾಕ್ಷಿ ಬೆಳೆಗಾರರ ನೆರವಿಗೆ ದ್ರಾಕ್ಷಾರಸ ಮಂಡಳಿಯ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇದು ಕೂಡ ಚಿಕ್ಕಬಳ್ಳಾಪುರ ಭಾಗದ ದ್ರಾಕ್ಷಿ ರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಗೆ ಪೂರಕ ಬಜೆಟ್- ಕಟೀಲ್:ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ 2023-24ನೇ ಸಾಲಿನ ರಾಜ್ಯ ಆಯವ್ಯಯ ಪತ್ರವನ್ನು ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ. ಕೋವಿಡ್ ನಂತರದ ದಿನಗಳಲ್ಲಿ ಜಾಗತಿಕ ಚೇತರಿಕೆಗಿಂತ ತೀವ್ರಗತಿಯಲ್ಲಿ ಭಾರತ ಪುಟಿದೆದ್ದಿದೆ. ಇದೇ ಹಾದಿಯಲ್ಲಿ ಕರ್ನಾಟಕವೂ ದೃಢವಾಗಿ ಮುನ್ನಡೆಯುತ್ತಿದೆ. ಈ ಆಯವ್ಯಯವು ಅಭಿವೃದ್ಧಿ ಮತ್ತು ಉತ್ತಮ ಭವಿಷ್ಯದ ಭರವಸೆಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಉಜ್ವಲ ಭವಿಷ್ಯವನ್ನು ರೂಪಿಸುವ ಕಾರ್ಯಕ್ರಮಗಳನ್ನು ಅನುಷ್ಠಾಗೊಳಿಸುತ್ತಿರುವ ಸಾರ್ಥಕ ಭಾವದೊಂದಿಗೆ, ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ನಮ್ಮ ಕರ್ತವ್ಯಗಳು, ಗುರಿಗಳು ಹಾಗೂ ಫಲಿತಾಂಶಗಳ ದೂರದೃಷ್ಟಿಯೊಂದಿಗೆ ಈ ಆಯವ್ಯಯವನ್ನು ಮುಖ್ಯಮಂತ್ರಿಯವರು ಮಂಡಿಸಿದ್ದಾರೆ. ಅಲ್ಲದೆ, ಅದರ ಅನುಷ್ಠಾನದ ಕುರಿತು ಸ್ಪಷ್ಟತೆಯನ್ನೂ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಕ್ರಾಂತಿಕಾರಿ ಬದಲಾವಣೆಯ ಸೂಚಕ: ಸಿ.ಸಿ.ಪಾಟೀಲ್: ರಾಜ್ಯದ ಭವಿಷ್ಯದ ಕ್ರಾಂತಿಕಾರಿ ಬದಲಾವಣೆಗೆ ಈ ಬಾರಿಯ ಬಜೆಟ್ ಸೂಚಕವಾಗಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಸದೃಢವಾಗಿ ಬೆಳವಣಿಗೆ ಕಂಡಿರುವುದು ಮತ್ತು ರಾಜಸ್ವ ಸಂಗ್ರಹಣೆಯಲ್ಲಿ ಹೆಚ್ಚಳವಾಗಿರುವುದು ಇಡೀ ನಾಡಿನ ಸಮಗ್ರ ಬೆಳವಣಿಗೆಗೆ ಮೂಲಾಧಾರವಾಗಲಿದೆ. ನಮ್ಮ ಸರ್ಕಾರದ ಸಮರ್ಥ ಆಡಳಿತಕ್ಕೆ ಮತ್ತು ಮುಖ್ಯಮಂತ್ರಿಗಳ ದಕ್ಷ ನಾಯಕತ್ವಕ್ಕೆ ಇದು ನಿದರ್ಶನವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಅನ್ನು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.