ಬೆಂಗಳೂರು:ಸಾವಿನ ಸಂಖ್ಯೆ ಮುಚ್ಚಿಟ್ಟಿದ್ದಾರೆ ಎನ್ನುವ ಆರೋಪದ ಬಗೆಗಿನ ಮಾಧ್ಯಮಗಳ ಪ್ರಶ್ನೆಗಳಿಗೆ ಸಚಿವ ಸುಧಾಕರ್ ಉತ್ತರಿಸಿ, ರಾಜ್ಯದಲ್ಲಿ ಸಾವಿನ ಸಂಖ್ಯೆ ಮುಚ್ಚಿಟ್ಟಿಲ್ಲ, ಪದೇ ಪದೆ ಹೇಳುತ್ತಿದ್ದೇನೆ. ನಮ್ಮ ರಾಜ್ಯವನ್ನು ಬಿಹಾರಕ್ಕೆ ಹೋಲಿಸಬೇಡಿ. ಕರ್ನಾಟಕಕ್ಕೂ ಬಿಹಾರಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ. ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲ, ಅಂತಹ ಅವಕಾಶವೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ಅನ್ಲಾಕ್ ಮಾಡಿರುವ ವಿಚಾರವಾಗಿ ಸಚಿವ ಸುಧಾಕರ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ಅನ್ಲಾಕ್ ಮಾಡಿದರೂ ಜನರು ಎಚ್ಚರಿಕೆಯಿಂದ ಇರಬೇಕು, ಎರಡು ಡೋಸ್ ಲಸಿಕೆ ಪಡೆಯೋವರೆಗೂ ಜನ ಎಚ್ಚರವಾಗಿ ಇರಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕನಿಷ್ಠ ಶೇ 70 ಡೋಸ್ ಕಂಪ್ಲೀಟ್ ಆದ ಮೇಲೆ ನಾವು ಮೊದಲಿನಂತೆ ಆರಾಮಾಗಿ ಇರಬಹುದು. ಲಸಿಕೆ ಹಾಕಿಸಿಕೊಳ್ಳೋವರೆಗೂ ಯಾರು ಮೈ ಮರೆಯಬೇಡಿ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಆರ್ಥಿಕ ನಷ್ಟವಾಗಿದೆ, ಹೀಗಾಗಿ ಕೆಲ ವಿನಾಯಿತಿ ಕೊಡಲಾಗಿದೆ. ಅಳೆದು ತೂಗಿ ನಿರ್ಧಾರ ಮಾಡಿದ್ದೇವೆ. ಒಂದು ವೇಳೆ ರಿಯಾಯ್ತಿಯಿಂದ ಸೋಂಕು ಹೆಚ್ಚಳವಾದರೆ ಮತ್ತೆ ಕಠಿಣ ಕ್ರಮ ಗ್ಯಾರಂಟಿ ತೆಗೆದುಕೊಳ್ಳುತ್ತೇವೆ. ಶೇ 10ಕ್ಕೂ ಹೆಚ್ಚು ಸೋಂಕು ಇರೋ ಜಿಲ್ಲೆಗಳು ಗಂಭೀರವಾಗಿ ಪರಿಗಣಿಸಬೇಕು. ಶೇ 5ರ ಒಳಗೆ ಸೋಂಕು ಇರುವ ಜಿಲ್ಲೆಗಳು ಎಚ್ಚರ ತಪ್ಪಬಾರದು. ಹೆಚ್ಚು ಹೆಚ್ಚು ಟೆಸ್ಟ್ಗಳನ್ನು ಮಾಡಲು ಕ್ರಮವಹಿಸುತ್ತವೆ ಎಂದು ತಿಳಿಸಿದರು.