ಬೆಂಗಳೂರು :ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಬರಲು ಕಾರಣರಾದವರಿಗೆ ಸಿಎಂ ಹಾಗೂ ಬಿಜೆಪಿ ನ್ಯಾಯವನ್ನೇ ಒದಗಿಸಿದೆ. ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿಯೂ ಕೊಟ್ಟ ಮಾತಿನಂತೆ ಮುನಿರತ್ನ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಸೆವೆನ್ ಮಿನಿಸ್ಟರ್ ಕ್ವಾಟ್ರಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ರಚನೆಯಾಗಲು ಶಾಸಕ ಸ್ಥಾನ ಬಿಟ್ಟು ಮುನಿರತ್ನ ಬಿಜೆಪಿಗೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಹಾಗಾಗಿ, ಸ್ವಾಭಾವಿಕವಾಗಿ ಬಿಜೆಪಿಯ ಉನ್ನತ ಮಟ್ಟದ ನಾಯಕರು, ಮುಖ್ಯಮಂತ್ರಿ ಎಲ್ಲ ಸೇರಿ ಸರ್ವಾನುಮತದಿಂದ ಆರ್‌ಆರ್‌ನಗರ ಕ್ಷೇತ್ರಕ್ಕೆ ಮುನಿರತ್ನ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಿದ್ದಾರೆ. ಅಷ್ಟೇ ಸರ್ವಾನುಮತದಿಂದ ಜನಪರ ಕಾಳಜಿ ಮೂಲಕ ಕ್ಷೇತ್ರದ ಜನರ ಯಾವುದೇ ಪ್ರತಿರೋಧ ಇಲ್ಲದೇ ಹೆಚ್ಚಿನ ಬಹುಮತದಿಂದ ಗೆಲ್ಲಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ನಾಯಕರು ನ್ಯಾಯಯುತವಾದ ತೀರ್ಮಾನ ಮಾಡಲಿದ್ದಾರೆ. ಸರ್ಕಾರ ಬರುವ ವೇಳೆ ಕೊಟ್ಟ ಭರವಸೆಯಂತೆ ಮತ್ತು ಸರ್ಕಾರ ಬರಲು ಕಾರಣೀಕರ್ತರಾಗಿರುವವರಲ್ಲಿ ಮುನಿರತ್ನ ಕೂಡ ಒಬ್ಬರು ಎನ್ನುವ ಕಾರಣಕ್ಕೆ ಸ್ವಾಭಾವಿಕವಾಗಿ ಅವರಿಗೆ ಈ ಬಾರಿ ಅನ್ಯಾಯವಾಗಲ್ಲ ಎಂದು ಮುನಿರತ್ನಗೆ ಟಿಕೆಟ್ ಖಚಿತ ಎನ್ನುವ ಮಾಹಿತಿ ನೀಡಿದರು.
ಪಕ್ಷ ಯಾರನ್ನೂ ನಿರ್ಲಕ್ಷ್ಯ ಮಾಡಲ್ಲ. ಯಾವ ಯಾವ ಸಂದರ್ಭದಲ್ಲಿ ಯಾರಿಗೆ ಏನು ಅವಕಾಶ ಕೊಡಬೇಕೋ, ಮಾನ್ಯತೆ ಕೊಡಬೇಕು ಅದನ್ನು ಕೊಡಲಿದೆ. ಮುನಿರತ್ನ ವಿಚಾರದಲ್ಲಿಯೂ ಅದೇ ಆಗಲಿದೆ. ಯಾವ ಗೊಂದಲವೂ ಇಲ್ಲದೇ ಅವರಿಗೆ ಟಿಕೆಟ್ ಸಿಗಲಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜೊತೆ ಮಾತುಕತೆ ನಡೆಸಲು ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಆದರೆ, ಈಗ ಉಪ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಹಾಗಾಗಿ, ಸಿಎಂ ದೆಹಲಿಗೆ ಹೋಗುತ್ತಾರೋ ಅಥವಾ ದೂರವಾಣಿ ಮೂಲಕವೇ ಮಾತಾಡುತ್ತಾರೋ ನೋಡಬೇಕು ಎಂದರು.
ಮುಖ್ಯಮಂತ್ರಿಗಳ ಬದಲಾವಣೆ ಕುರಿತು ನಾಲ್ಕು ತಿಂಗಳ ಹಿಂದೆ ಸಭೆ ನಡೆದಿತ್ತು. ಸುರೇಶ್ ಅಂಗಡಿ ಅವರನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಲಾಗಿತ್ತು ಎನ್ನುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಸುರೇಶ್ ಅಂಗಡಿ ಸಹೋದರ ಈ ಮಾತು ಹೇಳಿದ್ದಾರೆ. ಆದರೆ, ಸುರೇಶ್ ಅಂಗಡಿ ಈಗ ನಮ್ಮ ಮಧ್ಯೆ ಇಲ್ಲ, ಎಲ್ಲರೂ ನೋವಿನಲ್ಲಿದ್ದೇವೆ. ಈಗ ಅವರ ಹೆಸರು ಪ್ರಸ್ತಾಪ ಮಾಡಿ ನೋವು ಕೊಡುವುದು ಸರಿಯಲ್ಲ. ಯಾರಿಗೂ ಇದು ಶೋಭೆ ತರುವುದಿಲ್ಲ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನಮ್ಮ ನಾಯಕರು ಸದೃಢವಾಗಿದ್ದಾರೆ, ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ಸದನದಲ್ಲಿಯೇ ಸಿಎಂ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿಯೂ ನಾವೇ ಗೆಲ್ಲಲಿದ್ದೇವೆ. ಇನ್ನೂ 10 ವರ್ಷ ಕಾಂಗ್ರೆಸ್‌ನ ಪ್ರತಿಪಕ್ಷ ಸ್ಥಾನದಲ್ಲೇ ಕೂರಿಸಲಿದ್ದೇವೆ ಎಂದು ಸಿಎಂ ದಿಟ್ಟವಾಗಿ ಹೇಳಿದ್ದಾರೆ. ಹಾಗಾಗಿ, ನಾಯಕತ್ವ ಬದಲಾವಣೆ ಕೇವಲ ಮಾಧ್ಯಮಗಳ ಸುದ್ದಿ ಅಷ್ಟೇ ಎಂದರು.