ಬೆಂಗಳೂರು: "ನಮ್ಮ ರಾಜ್ಯದ ಆರೋಗ್ಯ ಕಾರ್ಡ್ ಇಡೀ ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಮಾನ್ಯತೆ ಪಡೆದಿದೆ. ಕಾರ್ಡ್ ಹೊಂದಿದ ವ್ಯಕ್ತಿ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು. ಆದರೆ ರೆಫರಲ್ ವ್ಯವಸ್ಥೆ ತೆರವು ಮಾಡಲ್ಲ, ಸರ್ಕಾರಿ ಆಸ್ಪತ್ರೆಯಲ್ಲೇ ಮೊದಲು ಚಿಕಿತ್ಸೆ ಪಡೆಯುವುದು ಕಡ್ಡಾಯ" ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, "ರೋಗಿಗಳ ಸರದಿ ಸಾಲು ತಪ್ಪಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ಮಾಡಲಾಗಿದೆ. ದಿನದ 24 ಗಂಟೆಯೂ ಕೆಲಸ ಮಾಡಲಾಗುತ್ತದೆ. ರೋಗಿಗಳಿಗೆ ಅಗತ್ಯ ಸಲಹೆ ನೀಡಿ ತಜ್ಞ ವೈದ್ಯರ ಬಳಿ ಕಳಿಸಲಾಗುತ್ತದೆ. ರೋಗಿಗಳ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ".
"ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಎರಡರ ಕೋ ಬ್ರ್ಯಾಂಡ್ ಕಾರ್ಡ್ ನಾವು ವಿತರಿಸುತ್ತಿದ್ದೇವೆ. 1.78 ಕೋಟಿ ಕಾರ್ಡ್ ಕೊಡಲಾಗಿದೆ. ಇಡೀ ದೇಶದ ಯಾವುದೇ ರಾಜ್ಯ, ಯಾವುದೇ ಆಸ್ಪತ್ರೆಗೆ ಹೋದರೂ ಈ ಕಾರ್ಡ್ ಮಾನ್ಯವಿರಲಿದೆ. ರೆಫರೆಲ್ ವ್ಯವಸ್ಥೆ ತೆಗೆದು ಹಾಕಿದರೆ ಎಲ್ಲಾ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಇದರಿಂದ ನಮ್ಮ ಸರ್ಕಾರಿ ಆಸ್ಪತ್ರೆ ಬೇಡಿಕೆ ಕಡಿಮೆಯಾಗಲಿದೆ. ಹಾಗಾಗಿ, ಅದನ್ನು ಮಾಡಲು ಸಾಧ್ಯವಿಲ್ಲ, ಆದರೆ ಸುಧಾರಣೆ ಮಾಡೋಣ. ಇನ್ನು ಮೂರು ತಿಂಗಳಿನ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುತ್ತದೆ."
"ಖಾಸಗಿ ಆಸ್ಪತ್ರೆಗಳಲ್ಲಿ ನಮ್ಮ ಆರೋಗ್ಯ ವಿಮೆ ಯೋಜನೆಗೆ ಪ್ಯಾಕೇಜ್ ಕಡಿಮೆ ಎಂದು ಒಪ್ಪುತ್ತಿಲ್ಲ ಎನ್ನುವ ಆರೋಪಗಳಿವೆ, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಆದರೆ ತುರ್ತು ಸ್ಥಿತಿಯಲ್ಲಿ ರೆಫರೆನ್ಸ್ ಕಡ್ಡಾಯವಿಲ್ಲ, ಅಪಘಾತ ಇತ್ಯಾದಿ ವೇಳೆ ಹತ್ತಿರದ ಯಾವುದೇ ಆಸ್ಪತ್ರೆಗೆ ಬೇಕಾದರೂ ದಾಖಲಿಸಬಹುದು, ಯಾವುದೇ ಆಸ್ಪತ್ರೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ಖಾಸಗಿ ಆಸ್ಪತ್ರೆಗೆ ಸರ್ಕಾರದಿಂದ ಪಾವತಿ ಮಾಡಬೇಕಾದ ಪೇಮೆಂಟ್ ಸಮಸ್ಯೆ ಇಲ್ಲ, ಒಂದು ತಿಂಗಳಿನಲ್ಲೇ ಸರ್ಕಾರ ಖಾಸಗಿ ಆಸ್ಪತ್ರೆಗೆ ಹಣ ಪಾವತಿ ಮಾಡುತ್ತದೆ" ಎಂದರು.
ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿ, "39 ಲಕ್ಷ ಜನರಿಗೆ ಆರೋಗ್ಯ ಸೇವೆ ಸಿಕ್ಕಿದೆ. ಎರಡನೇ ಹಂತದಲ್ಲಿ ಶೇ. 20 ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿದೆ. ಬಿಪಿಎಲ್ಗೆ 5 ಲಕ್ಷ ಹಾಗೂ ಎಪಿಎಲ್ ಗೆ 1.5 ಲಕ್ಷ ರೂ.ವೆಚ್ಚದ ಚಿಕಿತ್ಸೆ ಲಭಿಸಲಿದೆ. ಅಮೆರಿಕದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋದರೆ ಅಲ್ಲಿ ದಾಖಲೆ ಇರುವುದಿಲ್ಲ. ಆದರೆ, ನಮ್ಮ ಕಾರ್ಡ್ ಕಾಶ್ಮೀರಕ್ಕೆ ಹೋದರೂ ಮಾನ್ಯತೆ ಇದೆ, ರೋಗ ಮತ್ತು ವಿಳಾಸದ ಸಂಪೂರ್ಣ ಮಾಹಿತಿ ಅದರಲ್ಲೇ ಲಭ್ಯವಿರಲಿದೆ. ಇನ್ನು ಮೂರು ತಿಂಗಳಿನಲ್ಲಿ ಬಾಕಿ ಇರುವ ಆರೋಗ್ಯ ಕಾರ್ಡ್‌ಗಳನ್ನು ಸಂಪೂರ್ಣವಾಗಿ ಕೊಡುವ ಗುರಿ ಹಾಕಿಕೊಳ್ಳಲಾಗಿದೆ" ಎಂದು ತಿಳಿಸಿದರು.