ಬೆಂಗಳೂರು: ಆರ್.ಆರ್ ನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತುಳಸಿ ಮುನಿರಾಜುಗೌಡ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರಗೊಂಡಿದ್ದರೂ ಅಸಮಾಧಾನ ಹೊರಹಾಕದೆ ದೇಶ ಮೊದಲು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪಕ್ಷ ನಿಷ್ಠೆ ಮೆರೆದಿದ್ದಾರೆ.
ತುಳಸಿ ಮುನಿರಾಜುಗೌಡ ಟ್ವೀಟ್ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತಗೊಂಡಿದ್ದ ಮುನಿರಾಜುಗೌಡ, ಈ ಬಾರಿ ಮುನಿರತ್ನಗಾಗಿ ಕ್ಷೇತ್ರವನ್ನು ತ್ಯಾಗ ಮಾಡುವಂತಾಗಿದೆ. ಹೈಕಮಾಂಡ್ ಮುನಿರತ್ನಗೆ ಟಿಕೆಟ್ ನೀಡಿದ ನಂತರ ಮೌನಕ್ಕೆ ಶರಣಾಗಿರುವ ಮುನಿರಾಜುಗೌಡ, ಎಲ್ಲಿಯೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿಲ್ಲ. ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದರೂ ಬಹಿರಂಗವಾಗಿ ಏನನ್ನೂ ಹೇಳಿಲ್ಲ.
ಇಷ್ಟರ ನಡುವೆ ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆ ಎಂದು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡು ಪಕ್ಷ ನಿಷ್ಠೆ ಮೆರೆದಿದ್ದಾರೆ. ಟಿಕೆಟ್ ಸಿಗದಿದ್ದರೂ ಅಸಮಾಧಾನ ವ್ಯಕ್ತಪಡಿಸದೆ ದೇಶ ಮೊದಲು ಎನ್ನುವ ಹೇಳಿಕೆ ಪಕ್ಷದ ನಾಯಕ ಗಮನ ಸೆಳೆದಿದೆ.
"ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆ' ಎಂಬ ಸಿದ್ಧಾಂತಕ್ಕೆ ಬದ್ಧರಾಗಿರುವ ಬಿಜೆಪಿಯ ಯುವ ನಾಯಕ ತುಳಸಿಮುನಿರಾಜು ನಿಲುವು ಶ್ಲಾಘನೀಯ. ಇಂತಹ ನಿಷ್ಠಾವಂತ ಕಾರ್ಯಕರ್ತರೇ ಬಿಜೆಪಿ ಪಕ್ಷದ ಆಸ್ತಿ. ಅಪಾರ ಸಾಮರ್ಥ್ಯ ಹೊಂದಿರುವ ಮುನಿರಾಜು ಅವರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.