ಬೆಂಗಳೂರು: ಅಂಗಾಂಗ ದಾನವನ್ನು ಪ್ರೇರೇಪಿಸಲು ಜೀವಸಾರ್ಥಕತೆ ಕಾರ್ಯಕ್ರಮವನ್ನು ಕರ್ನಾಟಕದ ಸೊಟ್ಟೊ (SOTTO-STATE ORGAN TISSUE TRANSPLANT ORGANISATION) ಎಂದು ಗುರುತಿಸಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಂಗಾಂಗ ಕಸಿ ಕಾರ್ಯಕ್ರಮದ ಪ್ರಚಾರಕ್ಕೆ ಸಂಬಂಧಿಸಿದಂತೆ ಜೀವಸಾರ್ಥಕತೆಯ ಪ್ರಮುಖರೊಂದಿಗೆ ಸಭೆ ನಡೆಸಿದರು. ಕೋವಿಡ್ ಪ್ರಕರಣಗಳ ಇಳಿಕೆಯೊಂದಿಗೆ ದಾನಿಗಳ ಸಂಖ್ಯೆ ಹೆಚ್ಚುತ್ತಿದೆ. 2019 ರಲ್ಲಿ 105 ಅಂಗಾಂಗ ದಾನಿಗಳಿದ್ದರು. 2020 ರಲ್ಲಿ ಪೂರ್ವ ಕೋವಿಡ್ ಸಮಯದಲ್ಲಿ ಅಂದರೆ ಜನವರಿಯಿಂದ ಮಾರ್ಚ್‌ವರೆಗೆ 25 ಹಾಗೂ ಕಳೆದ ಎರಡು ತಿಂಗಳಲ್ಲಿ 9 ಅಂಗಾಂಗ ಕಸಿ ನಡೆದಿದೆ. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯವು ಜೀವಸಾರ್ಥಕತೆಯ ಬಗ್ಗೆ ವರದಿ ನೀಡಿ, ಕರ್ನಾಟಕದ ಸೊಟ್ಟೊ ಎಂದು ಗುರುತಿಸಬೇಕೆಂದು ಶಿಫಾರಸು ಮಾಡಿದ್ದು, ಇದನ್ನು ಜಾರಿ ಮಾಡಲು ನಿರ್ಧರಿಸಲಾಯಿತು.