ಬೆಂಗಳೂರು:ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರೊಂದಿಗೆ ಇಂದು ಆರೋಗ್ಯ ಸಚಿವ ಸುಧಾಕರ್ ಆರೋಗ್ಯ ಸೌಧದಲ್ಲಿ ಸಭೆ ನಡೆಸಿದರು. ಈ ವೇಳೆ, ಆಶಾ ಕಾರ್ಯಕರ್ತೆಯರ ಕುಂದುಕೊರತೆ, ಬೇಡಿಕೆಗಳ ಕುರಿತು ಕೂಲಂಕಷ ಚರ್ಚೆ ನಡೆಯಿತು.
ಆಶಾ ಕಾರ್ಯಕರ್ತೆ ದಿನಕ್ಕೆ 2-3 ಗಂಟೆ ಕೆಲಸ ಮಾಡಿದರಷ್ಟೇ ಸಾಕು ಎಂದು ಹೇಳಿ ಪ್ರಾರಂಭ ಮಾಡಿದ ಕೆಲಸ ಇಂದು ದಿನವಿಡೀ ಮಾಡುವಂತಾಗಿದೆ. ಕೆಲಸದ ಒತ್ತಡ ಹೆಚ್ಚಿದ್ದು, ಇದಕ್ಕೆ ತಕ್ಕಂತೆ ಗೌರವ ಧನ ನೀಡಬೇಕೆಂದು ಸಂಘದ ಸದಸ್ಯರು ಮನವಿ ಮಾಡಿದರು.
ಈ ಬಾರಿಯ ಬಜೆಟ್ನಲ್ಲಿ ಗೌರವ ಧನ ಹೆಚ್ಚಳ ಮಾಡುವಂತೆ ಒತ್ತಾಯ ಮಾಡಲಾಗಿದೆ. ಈ ಕುರಿತು ಸಚಿವರಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಬಜೆಟ್ ಪೂರ್ವ ಸಭೆಯಲ್ಲಿ ಸಿಎಂ ಜೊತೆಗೆ ಮಾತನಾಡುವ ಭರವಸೆಯನ್ನು ಸಚಿವರು ನೀಡಿದ್ದಾರೆ ಅಂತ ಸಂಘದ ಕಾರ್ಯದರ್ಶಿ ನಾಗಲಕ್ಷ್ಮಿ ಮಾಹಿತಿ ನೀಡಿದ್ದಾರೆ.
ಬೇಡಿಕೆಗಳೇನು?:
- ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯದ ಪ್ರೋತ್ಸಾಹಧನ ಮತ್ತು ಗೌರವಧನ ಸೇರಿಸಿ, ಕನಿಷ್ಠ ರೂ. 1,200 ನಿಗದಿಯಾಗಬೇಕು. ನಗರದ ಆಶಾ ಕಾರ್ಯಕರ್ತೆಯರಿಗೆ ಅವರ ಕಾರ್ಯ ಕ್ಷೇತ್ರದ ಜನಸಂಖ್ಯೆಗೆ ಅನುಗುಣವಾಗಿ ವೇತನ ನಿಗದಿ ಮಾಡಬೇಕು.
- ರಾಜ್ಯ ಸರ್ಕಾರದಿಂದ ಕೋವಿಡ್ ಅವಧಿಯ ವಿಶೇಷ ಕೆಲಸಗಳಿಗೆ ವಿಶೇಷ ಭತ್ಯೆ ಘೋಷಿಸಬೇಕು.
- ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಸೇವೆಯಲ್ಲಿರುವ ಆಶಾ ಕಾರ್ಯಕರ್ತೆ ತೀವ್ರ ಕಾಯಿಲೆಗೆ ಒಳಗಾದಲ್ಲಿ ಮತ್ತು ಅಪಘಾತಕ್ಕೀಡಾದಲ್ಲಿ ಅವರಿಗೆ ಉಚಿತ ಚಿಕಿತ್ಸೆ ಮತ್ತು ಪರಿಹಾರ ಸೇರಿದಂತೆ 10ಕ್ಕೂ ಹೆಚ್ಚು ಹಕ್ಕೋತ್ತಾಯ ಮಾಡಲಾಗಿದೆ.
ಇದನ್ಣೂ ಓದಿ:ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ನಕಾರ : ಸಿಜೆ ಅಂಗಳಕ್ಕೆ ಹಿಜಾಬ್ ಕೇಸ್.. ಇಂದಿನ ವಾದ- ಪ್ರತಿವಾದ ಹೀಗಿತ್ತು!